ಬೆಂಗಳೂರು: ಕೆ.ಆರ್.ನಗರ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭವಾನಿ ರೇವಣ್ಣ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ , ಆದೇಶವನ್ನು ಮೇ 31 ರವರೆಗೆ ಕಾಯ್ದಿರಿಸಿದೆ. ಮೇ 31 ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿದೆ.

ಭವಾನಿ ರೇವಣ್ಣ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ವಕೀಲರಾದ ಸಂದೇಶ್ ಚೌಟ ಅವರು, ಕೆ.ಆರ್ ನಗರ ಮಹಿಳೆಯ ಕಿಡ್ನಾಪ್ ಕೇಸಿನ ದೂರಿನಲ್ಲಿ ಎಲ್ಲೂ ಕೂಡ ಭವಾನಿ ರೇವಣ್ಣ ಹೆಸರಿಲ್ಲ. ಅಲ್ಲದೇ ಸಂತ್ರಸ್ತೆ ಮಹಿಳೆಗೆ ಬೆದರಿಸಿದ್ದಾರೆ ಅಂತ ದೂರೂ ದಾಖಲಾಗಿಲ್ಲ. ಹೀಗಾಗಿ ಇದು ರಾಜಕೀಯ ಪ್ರೇರಿತ ಪ್ರಕರಣವಾಗಿದ್ದು, ಇದರಲ್ಲಿ ಭವಾನಿ ರೇವಣ್ಣರ ಪಾತ್ರ ಏನೂ ಇಲ್ಲ ಎಂದು ವಾದ ಮ೦ಡಿಸಿದರು. ಹಾಗೆ ಭವಾನಿ ಅವರಿಗೆ ಅನಾರೋಗ್ಯದ ಸಮಸ್ಯೆ ಇದ್ದು, ಅವರಿಗೆ ನಿರೀಕ್ಷಣಾ ಜಾಮೀನು ನೀಡಬಹುದು ಎಂದರು.

ಇದಕ್ಕೆSIT ಪರ SPP ಜಗದೀಶ್ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ. ಭವಾನಿ ರೇವಣ್ಣ ವಿರುದ್ಧ ಅನೇಕ ಸಾಕ್ಷಿಗಳಿವೆ. ಅಲ್ಲದೇ ಕೆ.ಆರ್ ನಗರ ಸಂತ್ರಸ್ತೆ ಹೇಳಿಕೆಯನ್ನೂ ನೀಡಿದ್ದಾರೆ. ಹೀಗಾಗಿ ಹೆಚ್ಚಿನ ವಿಚಾರಣೆಗೆ ಭವಾನಿ ರೇವಣ್ಣ ಅವರನ್ನು ಬಂಧಿಸದೇ ಬೇರೆ ಮಾರ್ಗವಿಲ್ಲ. ಭವಾನಿ ರೇವಣ್ಣ ಒಬ್ಬ ಪವರ್ ಫುಲ್ ವ್ಯಕ್ತಿಯಾಗಿದ್ದು, ಅವರ ಬಂಧನ ಅನಿವಾರ್ಯವಾಗಿದೆ ಎಂದು ವಾದ ಮಂಡಿಸಿ, ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಆಕ್ಷೇಪಣೆ ಸಲ್ಲಿಸಿದರು.
ಎರಡೂ ಕಡೆಯ ವಾದ ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಮೇ 31 ರ ವರೆಗೆ ಆದೇಶವನ್ನು ಕಾಯ್ದಿರಿಸಿದ್ದಾರೆ.
