ಬೆಂಗಳೂರು: ಕೆ.ಆರ್. ನಗರ ಸಂತ್ರಸ್ತೆ ಕಿಡ್ನ್ಯಾಪ್ ಕೇಸ್‌ನಲ್ಲಿ ಬಂಧನದ ಭೀತಿಯಿಂದ ನಾಪತ್ತೆಯಾಗಿರುವ ಭವಾನಿ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣ ಸಂಬಂಧ ಭವಾನಿ ರೇವಣ್ಣಗೆ ಹೈಕೋರ್ಟ್ ಏಕಸದಸ್ಯ ಪೀಠದಿಂದ ಮಧ್ಯಂತರ ಜಾಮೀನು ಮಂಜೂರಾಗಿದೆ. ಹಾಗೆಯೇ ಕೋರ್ಟ್ ಭವಾನಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಕೆ ಆರ್ ನಗರ ಮತ್ತು ಹಾಸನಕ್ಕೆ ಭವಾನಿ ರೇವಣ್ಣ ಪ್ರವೇಶಿಸಿಬಾರದು. ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಕೋರ್ಟ್ ಭವಾನಿಗೆ ಸೂಚನೆ ನೀಡಿದೆ.

ಜೂನ್ 14ರವರೆಗೆ ಮಾತ್ರ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಮುಂದಿನ ವಿಚಾರಣೆಯನ್ನು ಕೂಡ ಜೂನ್ 14ಕ್ಕೆ ಮುಂದೂಡಿದೆ. ಮಧ್ಯಾಹ್ನ 1 ಗಂಟೆ ಒಳಗೆ ವಿಚಾರಣೆಗೆ ಹಾಜರಾಗಲು ಹೈಕೋರ್ಟ್ ಸೂಚಿಸಿದೆ. ಪ್ರಜ್ವಲ್ ರೇವಣ್ಣರ ಪೆನ್ ಡ್ರೈವ್ ಪ್ರಕರಣದ ಸಂತ್ರಸ್ತೆಯನ್ನು ಕಿಡ್ನ್ಯಾಪ್ ಮಾಡಿದ ಆರೋಪದಲ್ಲಿ ಭವಾನಿ ರೇವಣ್ಣ ವಿರುದ್ಧವೂ ದೂರು ದಾಖಲಾಗಿತ್ತು. ಇನ್ನು ವಿಚಾರಣೆಗೆ ಹಾಜರಾಗುವಂತೆ ಭವಾನಿಗೆ ಎಸ್‌ಐಟಿ ನೊಟೀಸ್ ಕೂಡಾ ನೀಡಿತ್ತು. ಬಂಧನದ ಭೀತಿಯಲ್ಲಿದ್ದ ಭವಾನಿ ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದು, ನಿರೀಕ್ಷಣಾ ಜಾಮೀನು ಕೋರಿ ತಮ್ಮ ವಕೀಲರ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ರು. ಸದ್ಯ ಹೈಕೋರ್ಟ್‌ನಲ್ಲಿ ಮಧ್ಯಂತರ ಜಾಮೀನು ಮಂಜೂರಾಗಿದ್ದು ಭವಾನಿಗೆ ಬಿಗ್ ರಿಲೀಫ್ ಸಿಕ್ಕಿದೆ.