ಚಿಕ್ಕಮಗಳೂರು: ಸರ್ಕಾರಿ ಜಾಗದ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದಿದ್ದು ರಾತ್ರೋ ರಾತ್ರಿ 50 ಮಂದಿಯ ಮೇಲೆ ದೂರು ದಾಖಲಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಾಗದ ವಿಚಾರಕ್ಕೆ ಇಡೀ ಗ್ರಾಮವೇ ರಣರಂಗವಾದಂತಾಗಿದೆ.
ಸರ್ಕಾರಿ ಜಾಗದಲ್ಲಿ ದೇವಾಲಯ ಕಟ್ಟಲು ಲಂಬಾಣಿ ಜನಾಂಗದವರು ಜಾಗಕ್ಕೆ ತಂತಿ ಬೇಲಿ ಹಾಕಿದ್ರು. ಇದನ್ನು ವಿರೋಧಿಸಿ ಸಮುದಾಯ ಭವನ ಕಟ್ಟಲು ಇನ್ನೊಂದು ಸಮುದಾಯ ಪಟ್ಟು ಹಿಡಿದಿತ್ತು. ಈ ಗಲಾಟೆ ನಡುವೆಯೇ ಗ್ರಾಮದ ಕೆಲವರು ತಂತಿ ಬೇಲಿ ಕಿತ್ತು ಬಿಸಾಕಿದ್ರು. ಹೀಗೆ ಎರಡೂ ಸಮುದಾಯದವರ ನಡುವೆ ಗಲಾಟೆ ತಾರಕಕ್ಕೇರಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸರ್ಕಾರಿ ಜಾಗ ವಿವಾದ ರಾತ್ರಿಯಿಡೀ ವಿಕೋಪಕ್ಕೆ ತಿರುಗಿತ್ತು. ಇನ್ನು ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡು ಗುಂಪುಗಳನ್ನು ಸಮಾಧಾನ ಪಡಿಸಲು ಯತ್ನಿಸಿದ್ರು. ಘಟನೆ ಸಂಬಂಧ 50 ಮಂದಿಯ ಮೇಲೆ ದೂರು ದಾಖಲಾಗಿದೆ. ಬೂದಿ ಮುಚ್ಚಿದ ಕೆಂಡದಂತಾದ ನಾಗೇನಹಳ್ಳಿ ಗ್ರಾಮದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.