ಚಿಕ್ಕಮಗಳೂರು: ಅಕ್ರಮ ಗೋಮಾಂಸ ಮಾರಾಟಕ್ಕಾಗಿ ಜಾನುವಾರುಗಳ ಮಾರಣಹೋಮ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗನಳ್ಳ ಬಳಿ ನಡೆದಿದೆ. ಸುಮಾರು ಹತ್ತಕ್ಕೂ ಹೆಚ್ಚು ಹಸುಗಳ ತಲೆ, ಕಾಲು, ಚರ್ಮಗಳು ಪತ್ತೆಯಾಗಿದ್ದು, ಜಾನುವಾರಗಳ ಅವಶೇಷ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕಳೆದ ಎರಡು ದಿನಗಳಿಂದ ಹಲವು ಜಾನುವಾರುಗಳ ಕಳ್ಳತನವಾಗಿದ್ದು, ರೈತರ ಜಾನುವಾರು ಹಾಗೂ ಬೀಡಾಡಿ ದನಗಳ ಮಾರಣ ಹೋಮವೇ ನಡೆದಿದೆ.

ರೈತರ ಹಸುಗಳನ್ನು ಕದ್ದು ರಾತ್ರೋರಾತ್ರಿ ಗೋವುಗಳ ಮಾಂಸ ಕಡಿದು ದುಷ್ಕರ್ಮಿಗಳು ಮಾಂಸ ಸಾಗಾಟ ಮಾಡಿದ್ದಾರೆ. ಆತಂಕಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಇತ್ತೀಚಿಗೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುಗಳು ಮಂಗಮಾಯವಾಗ್ತಿದ್ದು, ಗೋ ಕಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.