ಬಳ್ಳಾರಿ:ಮನೆಯವರು ಪ್ರೀತಿ ನಿರಾಕರಿಸಿದ್ದರಿಂದ ಮನನೊಂದು ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಪಲ್ಲವಿ(24) ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದ ಕ್ಯಾರಕೊಪ್ಪ ರೈಲ್ವೆ ಗೇಟ್ ಬಳಿ ನಡೆದಿದೆ. ಪಲ್ಲವಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಧಾರವಾಡಕ್ಕೆ ಬಂದಿದ್ದಳು. ಪೊಲೀಸರು ತನಿಖೆ ನಡೆಸಿದಾಗ ಪಲ್ಲವಿಯ ಎರಡು ಡೆತ್ನೋಟ್ಗಳು ಪತ್ತೆಯಾಗಿವೆ.
ಪಲ್ಲವಿಯ ಜೇಬಿನಲ್ಲಿ ಸಿಕ್ಕ ಮೊದಲ ಡೆತ್ನೋಟ್ನಲ್ಲಿ ತನ್ನ ತಂದೆ-ತಾಯಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಅವರು ತನ್ನನ್ನು ಸದಾ ಹಾಸ್ಟೆಲ್ನಲ್ಲಿ ಇರಿಸಿದ್ದರು ಹಾಗೂ ನನ್ನ ಭಾವನೆಗಳಿಗೆ ಬೆಲೆ ನೀಡಿರಲಿಲ್ಲ ಎಂದು ನೋವಿನಿಂದ ಬರೆದಿದ್ದಾಳೆ. ಆಕೆಯ ರೂಮಿನಲ್ಲಿ ದೊರೆತ ಮತ್ತೊಂದು ಪತ್ರದಲ್ಲಿ ತಾನು ಪ್ರೀತಿಸುತ್ತಿದ್ದ ಯುವಕನ ಬಳಿ ಕ್ಷಮೆಯಾಚಿಸಿದ್ದು, ಮನೆಯವರು ನಮ್ಮ ಪ್ರೀತಿಗೆ ಒಪ್ಪದ ಕಾರಣ ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾಳೆ.
ಪಲ್ಲವಿ ಬಳ್ಳಾರಿ ತಾಲೂಕಿನ ದಮ್ಮೂರು ಕಗ್ಗಲ್ಲು ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು, ಆದರೆ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಆಕೆಗೆ ಸಂಬಂಧಿಕರೊಬ್ಬರ ಜೊತೆ ಮದುವೆ ನಿಶ್ಚಯಿಸಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಈ ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ಹುಬ್ಬಳ್ಳಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಯುವತಿಯ ಸಾವು ವೈಯಕ್ತಿಕ ಕಾರಣಗಳಿಂದ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಉದ್ಯೋಗ ನೇಮಕಾತಿ ವಿಳಂಬದಿಂದಾಗಿ ಈ ಆತ್ಮಹತ್ಯೆ ಸಂಭವಿಸಿದೆ ಎಂದು ಹರಡುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿದ್ದು, ಪ್ರಕರಣಕ್ಕೆ ಬೇರೆ ಬಣ್ಣ ಕಟ್ಟುವ ಅಥವಾ ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
