ಚಿತ್ರದುರ್ಗ : ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ನಡುವೆ ರೇಣುಕಾಸ್ವಾಮಿ ಪೋಷಕರು ದರ್ಶನ್ ಮನೆಗೆ ಭೇಟಿ ನೀಡಿದ್ದಾರೆಂಬ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹರಿದಾಡುತ್ತಿದೆ. ಅಷ್ಟಕ್ಕೂ ರೇಣುಕಾಸ್ವಾಮಿ ತಂದೆ ದರ್ಶನ್ ಮನೆಗೆ ಹೋಗಿದ್ರಾ? ಈ ಬಗ್ಗೆ ಖುದ್ದು ಕಾಶಿನಾಥ್ ಶಿವನಗೌಡ ಅವರೇ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಮನೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ವಿಚಾರಗಳು ಹರಿದಾಡುತ್ತಿದೆ. ಇದನ್ನ ನೋಡಿ ನಮಗೆ ಬಹಳ ನೋವಾಗಿದೆ. ನಾವು ದರ್ಶನ್ ಮನೆಗೆ ಹೋಗಿದ್ದೆವು. ದರ್ಶನ್ ನಮ್ಮ ಮನೆಗೆ ಬಂದಿದ್ದ ಎಂಬ ಸುದ್ದಿಗಳನ್ನು ಅನೇಕರು ಶೇರ್ ಮಾಡಿಕೊಂಡು ನಮ್ಮ ಕುಟುಂಬಕ್ಕೆ ನೋವು ಕೊಡುತ್ತಿದ್ದಾರೆ. ಅಷ್ಟಕ್ಕೂ ನಾವು ಯಾರನ್ನು ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಗನನ್ನು ಕಳೆದುಕೊಂಡಿರುವ ನಾವು ಕಾರ್ ತೆಗೆದುಕೊಂಡು ಏನು ಮಾಡುವುದು. ನಮ್ಮ ಸೊಸೆಗೆ ನೌಕರಿ ನೀಡಿ ಎಂದು ಸರ್ಕಾರವನ್ನು ಕೇಳಿದ್ದೇವೆ. ನೌಕರಿ ಕೊಡಲು ಬರುವುದಿಲ್ಲವೆಂದು ಸರ್ಕಾರದ ಕಡೆಯಿಂದ ನಮಗೆ ಉತ್ತರ ಬಂದಿದೆ. ಒಂದು ವೇಳೆ ಸರ್ಕಾರ ನೌಕರಿ ಕೊಡದಿದ್ದರೆ ರೇಣುಕಾಸ್ವಾಮಿ ಪತ್ನಿ ಹಾಗೂ ಮಗು ಬೀದಿ ಪಾಲಾಗುತ್ತಾರೆ. ನಮ್ಮ ಮನವಿಯನ್ನು ಸರ್ಕಾರ ಪುನರ್ ಪರಿಶೀಲಿಸಿ ಸರ್ಕಾರಿ ನೌಕರಿ ಕೊಡುವಂತೆ ಶಿವನಗೌಡ್ರು ಮನವಿ ಮಾಡಿದರು.
ರೇಣುಕಾಸ್ವಾಮಿ ಚಿಕ್ಕಪ್ಪ ಎಸ್. ಷಡಕ್ಷರಯ್ಯ ಮಾತನಾಡಿ, ಸುಳ್ಳು ಸುದ್ದಿಯಿಂದ ನಮ್ಮ ಮನಸ್ಸಿಗೆ ನೋವಾಗಿದೆ. ಪ್ರಕರಣವನ್ನು ಟ್ರಯಲ್ ಕೋರ್ಟ್ನಿಂದ ಫಾಸ್ಟ್ ಟ್ರಾಕ್ಗೆ ವರ್ಗಾಯಿಸಿ ಕೊಲೆ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
