ಪೋಷಕರ ನಿರ್ಲಕ್ಷ್ಯಕ್ಕೆ ಎಂಟು ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟಿದ್ದಾನೆ.
ಚಿಕ್ಕಮಗಳೂರು; ಏರ್ ಗನ್ ಜೊತೆ ಆಟವಾಡುವಾಗ ಮಿಸ್ ಫೈರ್ ಆಗಿ ಎಂಟು ವರ್ಷದ ಬಾಲಕ ಮೃತ ಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿ ನಡೆದಿದೆ. ಏರ್ ಗನ್ ಹಿಡಿದುಕೊಂಡು ಆಟ ಆಡುವಾಗ ಬಾಲಕ ಟ್ರಿಗರ್ ಒತ್ತಿದ್ದ ಪರಿಣಾಮ ಗನ್ ನಲ್ಲಿದ್ದ ಗುಂಡು ಬಾಲಕನ ದೇಹದೊಳಗೆ ಹೊಕ್ಕಿದೆ. ಕೂಡಲೇ ಬಾಲಕ ವಿಷ್ಣುವನ್ನು ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.
ಸಾಮಾನ್ಯವಾಗಿ ಮಲೆನಾಡು ಪ್ರದೇಶದ ತೋಟಗಳಲ್ಲಿ ಮಂಗನ ಕಾಟ ಹೆಚ್ಚಾಗಿರುವುದರಿಂದ ಅವುಗಳನ್ನು ಓಡಿಸುವ ಸಲುವಾಗಿ ಏರ್ ಗನ್ ತಂದಿಟ್ಟುಕೊಂಡಿರುತ್ತಾರೆ. ಹಾಗೆಯೇ ಈ ದಂಪತಿ ಕೂಡ ಏರ್ ಗನ್ ತಂದು ಇಟ್ಟುಕೊಂಡಿದ್ದರು. ಮನೆಯಲ್ಲಿ ಎಲ್ಲರೂ ಇರುವಾಗಲೇ ಬಾಲಕ ವಿಷ್ಣು, ಮನೆಯವರ ಕಣ್ತಪ್ಪಿಸಿ ಗನ್ ತೆಗೆದುಕೊಂಡು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಈ ಬಗ್ಗೆ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವೊಂದು ಬಾರಿ ಮಕ್ಕಳ ಮೇಲೆ ಎಷ್ಟೇ ನಿಗಾ ವಹಿಸಿದರೂ ಸಾಲದು. ಪೋಷಕರು ಏರ್ ಗನ್ ನನ್ನು ಬಾಲಕನ ಕೈಗೆ ಸಿಗದಂತೆ ಸ್ವಲ್ಪ ಎಚ್ಚರ ವಹಿಸಿದ್ದರೇ ಬಹುಷಃ ಆತನ ಪ್ರಾಣ ಉಳಿಯುತ್ತಿತ್ತು ಎನಿಸುತ್ತದೆ.
– ಕಾವ್ಯಶ್ರೀ ಕಲ್ಮನೆ