ಪಾಂಡವಪುರ: ಕೆಲವೇ ತಿಂಗಳ ಹಿಂದೆಯಷ್ಟೇ ಮಂಡ್ಯ ತಾಲೂಕಿನ ಆಲೆಮನೆಯೊಂದರಲ್ಲಿ ಅಕ್ರಮ ಭ್ರೂಣಲಿಂಗ ಪತ್ತೆ ದಂಧೆ ಬೆಳಕಿಗೆ ಬಂದಿತ್ತು. ಇದೀಗ ಮಂಡ್ಯ ಜಿಲ್ಲೆಯಲ್ಲೇ ಮತ್ತೊಂದು ಅಕ್ರಮ ಭ್ರೂಣ ಲಿಂಗ ಪತ್ತೆ ದಂಧೆ ಬಯಲಾಗಿದೆ. ಹೌದು ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಎಗ್ಗಿಲ್ಲದೇ ಸಾಗ್ತಿದ್ದು, ನಿನ್ನೆ ಪಾಂಡವಪುರದ ಸರ್ಕಾರಿ ಆಸ್ಪತ್ರೆ ಕ್ವಾರ್ಟಸ್ ನಲ್ಲಿಯೇ ಅಕ್ರಮವಾಗಿ ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಜಾಲವೊಂದನ್ನ ಜಿಲ್ಲಾ ಆರೋಗ್ಯಾಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಹೆಣ್ಣು ಭ್ರೂಣ ಹತ್ಯೆ ಮಾಡ್ತಿದ್ದಾಗಲೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದ್ರೂ ಕಂದಮ್ಮನನ್ನು ಉಳಿಸಲು ಆಗಲೇ ಇಲ್ಲ. ಪ್ರಪಂಚ ನೋಡುವ ಮೊದಲೇ ಎಳೆ ಕಂದಮ್ಮ ಕಣ್ಣು ಮುಚ್ಚಿದೆ. ಆನಂದ್ ಮತ್ತು ಅಶ್ವಿನಿ ದಂಪತಿಯಿಂದ ಈ ಕೃತ್ಯ ನಡೆದಿದ್ದು, ದಂಪತಿ ಪಾಂಡವಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಖಚಿತ ಮಾಹಿತಿ ಮೇರೆಗೆ ಮಂಡ್ಯ ಡಿಎಚ್‌ಒ ಮೋಹನ್ ನೇತೃತ್ವದಲ್ಲಿ ಅಧಿಕಾರಿಗಳು ಹೆಲ್ತ್ ಕ್ವಾಟ್ರಸ್ ಗೆ ದಾಳಿ ನಡೆಸಿದ್ದಾರೆ. ಮೈಸೂರು ಮೂಲದ ಪುಷ್ಪಲತಾ ಎಂಬ ಮಹಿಳೆ ಗರ್ಭಪಾತ ಮಾಡಿಸಿಕೊಳ್ಳಲು ಪಾಂಡವಪುರಕ್ಕೆ ಆಗಮಿಸಿದ್ದಳು. ಈಕೆಗೆ ಈಗಾಗಲೇ ಇಬ್ಬರು ಹೆಣ್ಣುಮಕ್ಕಳಿದ್ದು, ಮೂರನೇ ಮಗು ಹೆಣ್ಣು ಎಂದು ತಿಳಿದು ಭ್ರೂಣ ಹತ್ಯೆ ಮಾಡಿಸಿಕೊಳ್ಳಲು ಬಂದಿದ್ದಳು.
ನಿನ್ನೆ ತಡರಾತ್ರಿ ಹೆಲ್ತ್ ಕ್ವಾಟ್ರಸ್ ಮನೆಯಲ್ಲಿ ಗರ್ಭಪಾತಕ್ಕೆ ತಯಾರಿ ಮಾಡಿಕೊಳ್ಳಲಾಗಿತ್ತು. ಅಧಿಕಾರಿಗಳು ದಾಳಿ ನಡೆಸುವಷ್ಟರಲ್ಲಿ ಪುಷ್ಟಲತಾ ಗರ್ಭಪಾತದ ಔಷಧಿ ಸೇವಿಸಿದ್ದು, ವೈದ್ಯರು ಎಷ್ಟೇ ಪ್ರಯತ್ನಿಸಿದ್ರೂ ಮಗುವನ್ನು ಉಳಿಸಲಾಗಲಿಲ್ಲ. ಇನ್ನು ಘಟನೆ ಸಂಬಂಧ ಆರೋಪಿಗಳಾದ ಆನಂದ್ ಮತ್ತು ಅಶ್ವಿನಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.