ಬೆಂಗಳೂರು: ʻಸಿಂಪಲ್ ಸ್ಟಾರ್ʼ ನಟ ರಕ್ಷಿತ್ ಶೆಟ್ಟಿ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನವೀನ್ ಕುಮಾರ್ ಎಂಬುವವರು ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲಿಸಿದ್ದಾರೆ. ಅನುಮತಿ ಪಡೆಯದೇ ಎರಡು ಚಿತ್ರಗಳ ಹಾಡನ್ನು ಬಳಕೆ ಮಾಡಿದ್ರಿಂದ ಕಾಪಿರೈಟ್ ಉಲ್ಲಂಘನೆ ಆರೋಪದಡಿ ಎಫ್ಐಆರ್ ದಾಖಲಾಗಿದೆ.

ಅದ್ಯಾಕೋ ಕಾಫಿರೈಟ್ ಉಲ್ಲಂಘನೆ ಆರೋಪ ರಕ್ಷಿತ್ ಶೆಟ್ಟಿಯನ್ನು ಬೆಂಬಿಡದೇ ಕಾಡ್ತಿದೆ. ಅಂದು ಕಿರಿಕ್ ಪಾರ್ಟಿ ಚಿತ್ರದ ಹಾಡೊಂದರ ಮೇಲೂ ಕಾಪಿರೈಟ್ ಉಲ್ಲಂಘಿಸಿದ್ದ ಆರೋಪ ಎದುರಾಗಿತ್ತು. ಇದೀಗ ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ನ್ಯಾಯ ಎಲ್ಲಿದೆ ಹಾಗೂ ಗಾಳಿಮಾತು ಚಿತ್ರದ ಎರಡು ಹಾಡುಗಳನ್ನು ಬಳಕೆ ಮಾಡಿರುವ ಆರೋಪ ಇದೆ. ಈ ಹಿನ್ನೆಲೆ ಎಂಆರ್ ಟಿ ಮ್ಯೂಸಿಕ್ ಕಂಪನಿ ಪಾಲುದಾರ ನವೀನ್ ಕುಮಾರ್ ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲಿಸಿದ್ದಾರೆ. ಹಕ್ಕುಸ್ವಾಮ್ಯ ಹಾಗೂ ಪ್ರಸಾರದ ಹಕ್ಕನ್ನ ಖರೀದಿ ಮಾಡದೇ ಹಾಡನ್ನು ಬಳಸಿರೋದಕ್ಕೆ ನವೀನ್ ಕುಮಾರ್ ದೂರು ನೀಡಿದ್ದಾರೆ.

ದೂರಿನ ಹಿನ್ನೆಲೆ ಯಶವಂತಪುರ ಪೊಲೀಸರು ನಟ ರಕ್ಷಿತ್ ಶೆಟ್ಟಿಗೆ ಕರೆ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ಬ್ಯಾಚುಲರ್ ಪಾರ್ಟಿ ಸಿನಿಮಾ ರಿಲೀಸ್ ಆಗಿತ್ತು. ನ್ಯಾಯ ಎಲ್ಲಿದೆ ಹಾಗೂ ಗಾಳಿಮಾತು ಚಿತ್ರದ ಎರಡು ಹಾಡುಗಳನ್ನು ಬಳಸುವ ಬಗ್ಗೆ ಆಗಲೇ ಮಾತುಕತೆ ನಡೆದಿತ್ತಂತೆ. ಆದ್ರೆ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗದೇ ಹಾಡನ್ನು ಬಳಸುವ ಬಗ್ಗೆ ಮಾತುಕತೆ ಅಲ್ಲಿಗೇ ನಿಂತಿತ್ತು. ಈ ಮಧ್ಯೆ ಅನುಮತಿ ಪಡೆಯದೇ ಹಾಡನ್ನು ಬಳಸಿರೋದಕ್ಕೆ ಪರಮ್ವಾ ಸ್ಟುಡಿಯೋಸ್ ಹಾಗೂ ನಟ ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ.