ಹಾಸನದಲ್ಲಿ ನಿನ್ನೆ ನಡದೆ ಭೀಕರ ಅಪಘಾತದಲ್ಲಿ ಆರು ಮಂದಿ ಬಲಿಯಾಗಿದ್ರು. ಅವರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದ ನಾರಾಯಣಪ್ಪ, ಸುನಂದ ಹಾಗೂ ನೇತ್ರ (ಸುನಂದಾರ ಸಹೋದರಿ), ಆಕೆಯ ಗಂಡ ರವಿಕುಮಾರ್ ಅವರು ಕೂಡ ಸಾವನ್ನಪ್ಪಿದ್ದರು.

ಇನ್ನು ಮೃತ ಸುನಂದಾ ಹಾಗೂ ನೇತ್ರಾ ಇಬ್ಬರೂ ಕೂಡ ಅಕ್ಕತಂಗಿಯರಾಗಿದ್ದು, ಇವರ ತವರು ಮನೆ ಚಿಕ್ಕಬಳ್ಳಾಪುರ ತಾಲೂಕಿನ ಚಿಗಟೇನಳ್ಳಿ ಗ್ರಾಮ. ಮೃತ ನೇತ್ರಾ ಹಾಗೂ ರವಿಕುಮಾರ್ ದಂಪತಿಗೆ ಮೂರು ಜನ ಮಕ್ಕಳಿದ್ದಾರೆ. ಅಪಘಾತದಲ್ಲಿ ಮಗ ಚೇತನ್, ತಂದೆ-ತಾಯಿ ಜೊತೆ ಮೃತಪಟ್ಟಿದ್ದಾನೆ. ಮಕ್ಕಳಾದ ಪಲ್ಲವಿ ಹಾಗೂ ಪೂರ್ಣಿಮಾರನ್ನ ತವರು ಮನೆ ಚಿಗಟೇನಹಳ್ಳಿಯಲ್ಲಿ ಬಿಟ್ಟು ಹೋಗಿದ್ದರು. ಹಾಗಾಗಿ ಅವರು ಬದುಕುಳಿದಿದ್ದಾರೆ. ಇದೀಗ ಹೆತ್ತವರನ್ನು ಕಳೆದುಕೊಂಡು ಇಬ್ಬರು ಹೆಣ್ಣುಮಕ್ಕಳು ಅನಾಥರಾಗಿದ್ದಾರೆ.

ಈ ವಿಚಾರ ತಿಳಿದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಸಂಬಂಧಿಕರಿಗೆ ಸಾಂತ್ವಾನ ಹೇಳಿದ್ದಾರೆ. ಜೊತೆಗೆ ಮೃತರ ಇಬ್ಬರು ಹೆಣ್ಣು ಮಕ್ಕಳ ಶೈಕ್ಷಣಿಕ ಜವಾಬ್ದಾರಿಯನ್ನು ಶಾಸಕ ಪ್ರದೀಪ್ ಈಶ್ವರ್ ವಹಿಸಿಕೊಂಡಿದ್ದಾರೆ. ಸಂತ್ರಸ್ತರನ್ನು ಮಾತನಾಡಿಸಿ, ಅವರ ಕಷ್ಟ ಕೇಳಿಸಿಕೊಂಡ ಅವರು, ತಮ್ಮ ಕೈಲಾದಷ್ಟು ಸಹಾಯ ನೀಡುವುದಾಗಿ ಹೇಳಿದ್ದಾರೆ. ಜೊತೆಗೆ ಪರಿಹಾರ ಕೂಡ ನೀಡಿದ್ದಾರೆ. ಬಾಲಕಿಯರ ಹೆಸರಿನಲ್ಲಿ ತಲಾ 1 ಲಕ್ಷ ರೂಪಾಯಿ ಪೋಸ್ಟಲ್ ಡೆಪಾಸಿಟ್ ಕೂಡ ಇರಿಸುವ ಭರವಸೆ ನೀಡಿದ್ದಾರೆ.
ಇನ್ನು ಬಾಲ್ಯದಲ್ಲಿ ತಾನೂ ಕೂಡ ಅಪಘಾತದಲ್ಲಿ ತಂದೆ-ತಾಯಿ ಕಳೆದುಕೊಂಡು ಅನಾಥರಾಗಿದ್ದ ಸ್ಥಿತಿಯನ್ನು ನೆನೆಸಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಅವರು “ಒಂದು ಮಗು ಆರನೇ ತರಗತಿ ಇನ್ನೊಂದು ನಾಲ್ಕನೇ ತರಗತಿಯಲ್ಲಿದೆ. ನಾಳೆಯೇ ಇಬ್ಬರ ಹೆಸರಿನಲ್ಲಿ ಮುದ್ದೇನಹಳ್ಳಿ ಪೋಸ್ಟ್ ಆಫೀಸ್‌ನಲ್ಲಿ ಒಂದೊಂದು ಲಕ್ಷ ಡೇಪಾಸಿಟ್ ಇಡುತ್ತೇನೆ. ಇವರು ಮದುವೆ ವಯಸ್ಸಿಗೆ ಬಂದಾಗ ನಾನು ಶಾಸಕ ಆಗಿರಲಿ, ಆಗದೇ ಇರಲಿ ಅಣ್ಣನ ಸ್ಥಾನದಲ್ಲಿ ನಿಂತು ಮದುವೆ ಮಾಡುತ್ತೇನೆ. ಇಬ್ಬರ ಮಕ್ಕಳ ಭವಿಷ್ಯವನ್ನು ನಾನು ನೋಡಿಕೊಳ್ಳುತ್ತೇನೆ. ಅವರ ಭವಿಷ್ಯಕ್ಕೆ ಏನು ಬೇಕೋ ಅದನ್ನು ಮಾಡುತ್ತೇನೆ” ಎಂದಿದ್ದಾರೆ. ಇದೆಲ್ಲಾ ಮುಗಿಯಲಿ, ಅವರು ಇಲ್ಲಿಯೇ ಓದುತ್ತಾರೋ ಇಲ್ಲ ಬೇರೆ ಕಡೆ ಓದುತ್ತಾರೋ ಅಲ್ಲಿ ಓದಿಸುತ್ತೇನೆ. ನೀವು ಧೈರ್ಯವಾಗಿರಬೇಕು. ನಾನು ಚಿಕ್ಕವಯಸ್ಸಿನಲ್ಲಿ ಅನಾಥನಾದಾಗ ನನ್ನ ಜೊತೆಗೆ ಪ್ರದೀಪ್ ಈಶ್ವರ್ ಇರಲಿಲ್ಲ, ಈಗ ನಿಮ್ಮ ಜೊತೆ ಪ್ರದೀಪ್ ಈಶ್ವರ್ ಇರುತ್ತೇನೆ. ಅವರ ತಂದೆ ತಾಯಿ ಸ್ಥಾನದಲ್ಲಿ ನಿಂತು ನಾನು ಕಾಪಾಡುತ್ತೇನೆ” ಎಂದು ಭಾವುಕರಾಗಿದ್ದಾರೆ.
