ಚಿಕ್ಕಮಗಳೂರು: ಸೈಬರ್ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಲಕ್ಷಾಂತರ ರೂಪಾಯಿ ವಂಚಕರ ಪಾಲಾಗುತ್ತಿದೆ.
ಕಡೂರಿನ ದರ್ಶನ್ ಎನ್.ಎಂ. ಎಂಬುವವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 4,02,000 ರೂಪಾಯಿ ಹಣವನ್ನು ಸೈಬರ್ ಕಳ್ಳರು ಲೂಟಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ದರ್ಶನ್ ಅವರಿಗೆ ಜನವರಿ 29ರಂದು ಬೆಳಿಗ್ಗೆ ಮೊಬೈಲ್ಗೆ ವಂಚಕರಿಂದ ಸಂದೇಶವೊಂದು ಬಂದಿದ್ದು, ಅದನ್ನು ಓಪನ್ ಮಾಡಿದ ಕೆಲವೇ ಸಮಯದಲ್ಲಿ ಅವರ ಕೆನರಾ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿರುವ ಬಗ್ಗೆ ಸರಣಿ ಸಂದೇಶಗಳು ಬರಲಾರಂಭಿಸಿವೆ.
ತಕ್ಷಣವೇ ಅವರು ಕಡೂರಿನ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ವಿಚಾರಿಸಿದಾಗ, ಅವರ ಗಮನಕ್ಕೆ ಬಾರದಂತೆ ಅಪರಿಚಿತರು ಹಂತ ಹಂತವಾಗಿ ಒಟ್ಟು 4.02 ಲಕ್ಷ ರೂಪಾಯಿಗಳನ್ನು ವರ್ಗಾವಣೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ದರ್ಶನ್ ಅವರು ಜನವರಿ 31ರಂದು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನ್ನ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮತ್ತು ಕಳೆದುಹೋದ ಹಣವನ್ನು ವಾಪಸ್ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
