ಹಾಸನ; ಜಿಲ್ಲೆಯಲ್ಲಿ ಗಾಂಜಾ ಹಾವಳಿ ತೀವ್ರಗೊಳ್ಳುತ್ತಿರುವ ನಡುವೆಯೇ, ಅಮಲಿನಲ್ಲಿದ್ದ ಯುವಕರ ಗುಂಪೊಂದು ಯುವಕನನ್ನು ಬರ್ಬರವಾಗಿ ಕೊಲೆ ಮಾಡಿ ನಂತರ ವಿಡಿಯೋ ಮಾಡಿಕೊಂಡು ವಿಕೃತಿ ಮೆರದಿರುವ ಘಟನೆ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ನಡೆದಿದೆ. . ಕ್ರೂರಿಗಳು ಕೃತ್ಯದ ನಂತರ ಮೃತದೇಹದ ಮುಂದೆ ನಿಂತು ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೊಲೆಯಾದ ಯುವಕ ಹೂವಿನಹಳ್ಳಿ ಕಾವಲು ಗ್ರಾಮದ ನಿವಾಸಿ, ಮೆಕ್ಯಾನಿಕ್ ಆಗಿದ್ದ ಕೀರ್ತಿ (22) ಎಂದು ಗುರುತಿಸಲಾಗಿದೆ. ಹಂತಕರು ಕೀರ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೆಕ್ಯಾನಿಕ್ ಆಗಿದ್ದ ಕೀರ್ತಿ ಡಿಸೆಂಬರ್ 8ರಂದು ರಾತ್ರಿ ಮನೆಗೆ ಬಂದಿರಲಿಲ್ಲ. ಮರುದಿನ (ಡಿಸೆಂಬರ್ 9) ಬೆಳಿಗ್ಗೆ, ಕೊಲೆ ಮಾಡಿರುವವರಲ್ಲಿ ಒಬ್ಬ ಶವದ ಮುಂದೆ ನಿಂತು, “ನಾವೇ ಇವನನ್ನು ಹೊಡೆದು ಕೊಂದಿದ್ದೇವೆ” ಎಂದು ಹೇಳುವ ಸೆಲ್ಫಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟದ್ದಾನೆ.
ಕೊಲೆ ಮಾಡಿದ ಬಳಿಕ ಈ ದುಷ್ಕರ್ಮಿಗಳು ಮನುಷ್ಯತ್ವ ಮರೆತು ವಿಕೃತ ಆನಂದಪಟ್ಟಿದ್ದಾರೆ. “ನಾವು ಹೊಡೆದಿದ್ದೀವಿ, ನಾವು ಮರ್ಡರ್ ಮಾಡಿದ್ದೀವಿ..ನಾವು ಇವನನ್ನ ಸಾಯಿಸಿದ್ದೇವೆ” ಎಂದು ಹೇಳುವುದಲ್ಲದೆ, ಮತ್ತೊಂದು ವಿಡಿಯೋದಲ್ಲಿ “ಹೇಯ್ ನಿಂತ್ಕೊಳ್ರೋ ನಾವು ದೊಡ್ಡದಾಗಿ ಬೆಳೆದು, ನಾವೂ ದೊಡ್ಡವರಾದ್ವಿ” ಎಂದು ಹೇಳುತ್ತಾ, ತಮ್ಮ ಕೃತ್ಯವನ್ನು ಸಂಭ್ರಮಿಸಿ ಅಟ್ಟಹಾಸ ಮೆರೆದಿದ್ದಾರೆ. ಈ ರಾಕ್ಷಸೀ ಕೃತ್ಯವು ಗಾಂಜಾ ಅಮಲಿನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಲ್ಫಿ ವಿಡಿಯೋ ಮಾಡಿದವನು ಆಲೂರು ಮೂಲದ ಆಟೋ ಚಾಲಕ ಉಲ್ಲಾಸ್ ಎಂದು ತಿಳಿದುಬಂದಿದೆ. ಉಲ್ಲಾಸ್ ಮತ್ತು ಕೀರ್ತಿ ಪರಸ್ಪರ ಪರಿಚಿತರಾಗಿದ್ದು, ಘಟನೆ ನಡೆದ ದಿನ ಒಟ್ಟಿಗೆ ಸೇರಿ ಪಾರ್ಟಿ ಮಾಡಿದ್ದಾರೆ. ತದನಂತರ ಏನಾಯಿತು ಎಂಬುದು ಸ್ಪಷ್ಟವಾಗಿಲ್ಲ. ಒಟ್ಟಿಗೆ ಹೋಗಿದ್ದ ಯುವಕರ ಗುಂಪಿನ ನಡುವೆ ನಡೆದ ಗಲಾಟೆಯೇ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಉಲ್ಲಾಸ್ ಒಂದು ವಿಡಿಯೋದಲ್ಲಿ ಒಬ್ಬನೇ ಇದ್ದರೆ, ಇನ್ನೊಂದು ವಿಡಿಯೋದಲ್ಲಿ ಮತ್ತಿಬ್ಬರು ಇರುವುದು ಕಂಡುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕೊಲೆಯ ಸೆಲ್ಫಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ವಿಡಿಯೋದ ಜಾಡು ಹಿಡಿದು ತನಿಖೆ ನಡೆಸಿದಾಗ, ಶವವು ಬಿಟ್ಟಗೌಡನಹಳ್ಳಿ ಬಳಿ ಇರುವುದು ಗೊತ್ತಾಗಿದೆ. ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು, ಸೂಕೊ ಟೀಂ, ಶ್ವಾನದಳ, ಮತ್ತು ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಹಾಸನ ನಗರ ಠಾಣೆ ಪೊಲೀಸರು ಪ್ರಮುಖ ಆರೋಪಿ ಉಲ್ಲಾಸ್ ಮತ್ತು ಇತರ ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.
