ಚಿಕ್ಕಮಗಳೂರು: ಮಲೆನಾಡಿನಲ್ಲಿ ಪಾಕಿಸ್ತಾನ ಪರ ಕೂಗು ಎದ್ದಿದ್ದು, ಫೇಸ್‌ಬುಕ್ ನಲ್ಲಿ ಕಿಡಿಗೇಡಿಯೊಬ್ಬ ಪಾಕಿಸ್ತಾನ ಜಿಂದಾಬಾದ್ ಎಂದು ಪೋಸ್ಟ್ ಹಾಕಿದ್ದಾನೆ. ಇದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಅಸ್ಗರ್ ಎಂಬಾತ ತನ್ನ ಫೇಸ್‌ಬುಕ್‌ನಲ್ಲಿ ಜಿಂದಾಬಾದ್ ಜಿಂದಾಬಾದ್ ಪಾಕಿಸ್ತಾನ್ ಜಿಂದಾಬಾದ್ ಎಂದು ಪೋಸ್ಟ್ ಹಾಕಿದ್ದಾನೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಜರಂಗದಳದ ವಿರುದ್ಧವೂ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದಾನೆ.

ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಕೆಲವೇ ಹೊತ್ತಿನಲ್ಲಿ ಅಕೌಂಟ್ ಡಿಲೀಟ್ ಮಾಡಿದ್ದಾನೆ. ಇನ್ನು ಸುಮೋಟೋ ಕೇಸ್ ದಾಖಲಿಸಿಕೊಂಡ ಕೊಪ್ಪ ಠಾಣೆ ಪೊಲೀಸರು ಆರೋಪಿ ಅಸ್ಗರ್‌ನನ್ನು ಬಂಧಿಸಿದ್ದಾರೆ. ಇದೀಗ ಕಾಫಿನಾಡ ಪಾಕ್ ಪ್ರೇಮಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಎನ್.ಆರ್.ಪುರ ಕೋರ್ಟ್ ಜೂನ್ 6ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಇನ್ನು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿ ವಿಕೃತಿ ಮೆರೆದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿಕ್ಕಮಗಳೂರು ಆಗ್ರಹಿಸಿದೆ. ಅಲ್ಲದೇ ರಾಮೇಶ್ವರಂ ಬಾಂಬ್ ಸ್ಫೋಟದ ಆರೋಪಿಗಳ ರೀತಿ ಇನ್ನೂ ಹತ್ತು ಹಲವು ಮನಸ್ಥಿತಿಯ ದೇಶವಿರೋಧಿಗಳು ನಮ್ಮಲ್ಲಿ ಇದ್ದು ಅವರನ್ನು ಕೂಡಲೇ ಬಂಧಿಸಿ ಸೂಕ್ತ ಶಿಕ್ಷೆಯನ್ನ ನೀಡಬೇಕು ಎಂದು ಒತ್ತಾಯಿಸಿದೆ.