ಉಡುಪಿ: ಪಾಂಗಾಳ ಶರತ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಆರೋಪಿ ಇದೀಗ ತಾನಾಗಿಯೇ ಕೋರ್ಟ್ ಗೆ ಬಂದು ಶರಣಾಗಿದ್ದು, ಇದು ದೈವದ ಪವಾಡವೇ ಎಂದು ಹೇಳಲಾಗ್ತಿದೆ.

ಹೌದು ಫೆಬ್ರವರಿ 5, 2023 ರಂದು ಉಡುಪಿಯ ಕಾಪುವಿನ ಪಾಂಗಾಳದಲ್ಲಿ ಶರತ್ ಶೆಟ್ಟಿಯನ್ನು ನಾಲ್ವರ ತಂಡ ಬರ್ಬರವಾಗಿ ಹತ್ಯೆ ಮಾಡಿತ್ತು. ಆದ್ರೆ ಕೊಲೆ ನಡೆದು ಹದಿನೈದು ತಿಂಗಳಾದ್ರೂ ಆರೋಪಿಗಳನ್ನು ಸೆರೆ ಹಿಡಿಯೋದಕ್ಕೆ ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಇದೀಗ ಈ ಕೊಲೆಯ ಪ್ರಮುಖ ಆರೋಪಿ ಯೋಗೀಶ್ ಆಚಾರ್ಯ ತಾನಾಗಿಯೇ ನ್ಯಾಯಾಲಯಕ್ಕೆ ಬಂದು ಶರಣಾಗಿದ್ದಾನೆ. ಯೋಗಿಶ್ ಆಚಾರ್ಯ ಮೇ 23 ರಂದು ಉಡುಪಿಯ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ವಕೀಲರ ಮೂಲಕ ಹಾಜರಾಗಿ ಶರಣಾಗಿದ್ದಾನೆ. ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ನೀಡಿತ್ತು. ಇದೀಗ ಪ್ರಕರಣದ ತನಿಖಾಧಿಕಾರಿ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಹೆಚ್ಚಿನ ತನಿಖೆ ನಡೆಸಲು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಇನ್ನೊಂದು ಮಹತ್ವದ ವಿಚಾರ ಅಂದ್ರೆ ಶರತ್ ಶೆಟ್ಟಿ ಕೊಲೆ ನಡೆದ ಬೆನ್ನಲ್ಲೇ ಶರತ್ ಕುಟುಂಬಸ್ಥರು ದೈವದ ನೇಮ ನಡೆಸಿದ್ದು, ಕೊಲೆ ಆರೋಪಿ ವಿರುದ್ಧ ದೈವದ ಬಳಿ ದೂರು ನೀಡಿ ನೋವು ಹೇಳಿಕೊಂಡಿದ್ರು. ಆಗ ದೈವ “ಆರೋಪಿ ಎಲ್ಲೇ ಇದ್ದರೂ ಪೊಲೀಸರ ಮುಂದೆ ತಂದು ನಿಲ್ಲಿಸುತ್ತೇನೆ” ಎಂದು ಅಭಯ ನೀಡಿತ್ತು. ಅಂತೆಯೇ ಇದೀಗ ಆರೋಪಿ ತಾನಾಗಿಯೇ ನ್ಯಾಯಾಲಯದ ಮುಂದೆ ಹಾಜರಾಗಿದ್ದು ಇದು ದೈವದ ಪವಾಡವೇ ಸರಿ ಎನ್ನಲಾಗ್ತಿದೆ. ದೈವ ನುಡಿದಂತೆ ನಡೆದಿದ್ದು ದೈವದ ಕಾರ್ಣಿಕ ನಿಜವಾಗಿದೆ.