ಬೆಂಗಳೂರು: ಅಶ್ಲೀಲ ಪೆನ್ ಡ್ರೈವ್ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಸದ್ಯ SIT ವಶದಲ್ಲಿದ್ದಾರೆ. ಕಸ್ಟಡಿಗೆ ಪಡೆದ ತಕ್ಷಣ ಅಧಿಕಾರಿಗಳು ಪ್ರಜ್ವಲ್ ಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ತನಿಖಾಧಿಕಾರಿಗಳ ಯಾವುದೇ ಪ್ರಶ್ನೆಗೂ ಪ್ರಜ್ವಲ್ ರೇವಣ್ಣ ಉತ್ತರ ನೀಡುತ್ತಿಲ್ಲ, ವಿಚಾರಣೆಗೆ ಸಹಕರಿಸುತ್ತಿಲ್ಲ ಎನ್ನಲಾಗಿದೆ. ಈ ಪ್ರಕರಣದಲ್ಲಿ ನನ್ನನ್ನು ಷಡ್ಯಂತ್ರ ಮಾಡಿ ಸಿಲುಕಿಸಲಾಗಿದೆ, ಇದೊಂದು ರಾಜಕೀಯ ಪಿತೂರಿ, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ಈ ಆರೋಪಗಳೆಲ್ಲ ಸುಳ್ಳಾಗಿದ್ದು, ಇದ್ರಲ್ಲಿ ಯಾವುದೇ ಸತ್ಯಾ೦ಶವಿಲ್ಲ. ನೀವು ಏನೇ ಪ್ರಶ್ನೆ ಕೇಳಿದರು, ನಾನು ಉತ್ತರ ನೀಡುವುದಿಲ್ಲ. ನನ್ನ ವಕೀಲರನ್ನು ಕೇಳಿ, ಆಮೇಲೆ ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆ ಎಂದು ಅಧಿಕಾರಿಗಳಿಗೆ ಒಂದೇ ಉತ್ತರ ನೀಡುತ್ತಿದ್ದು, ವಿಚಾರಣೆಗೆ ಸಹಕರಿಸುತ್ತಿಲ್ಲ ಎನ್ನಲಾಗಿದೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಿ, ನಂತರ ವೈದ್ಯಕೀಯ ತಪಾಸಣೆ ಮುಗಿಸಿದ ಬಳಿಕ ಪ್ರಜ್ವಲ್ ರೇವಣ್ಣರನ್ನು ಮೇ 31 ,ಶುಕ್ರವಾರದಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಲಯದಲ್ಲಿ ಪ್ರಜ್ವಲ್ ನನ್ನ 15 ದಿನ ಕಸ್ಟಡಿಗೆ ನೀಡುವಂತೆ SIT ಅಧಿಕಾರಿಗಳು ಮನವಿ ಮಾಡಿದ್ದರು. ಆದರೆ ನ್ಯಾಯಾಲಯ 1 ವಾರಗಳ ಕಾಲ SIT ಕಸ್ಟಡಿಗೆ ನೀಡಿ ಆದೇಶ ನೀಡಿತು. ಹೀಗಾಗಿ ಕಸ್ಟಡಿಗೆ ಪಡೆದ ತಕ್ಷಣ ವಿಚಾರಣೆ ಆರಂಭ ಮಾಡಿದ ಅಧಿಕಾರಿಗಳು ರಾತ್ರಿ 9 ಗಂಟೆಯ ತನಕ ಅನೇಕ ಪ್ರಶ್ನೆಗಳನ್ನು ಕೇಳಿ, ನಂತರ ಊಟ ನೀಡಿದ್ದಾರೆ ಎನ್ನಲಾಗಿದೆ. ಊಟ ಮಾಡಿ ರಾತ್ರಿ 11:30 ರ ತನಕ ಕೂತಿದ್ದ ಪ್ರಜ್ವಲ್ ನಂತರ ನಿದ್ದೆ ಮಾಡಿದ್ದಾರೆ.

ಇಂದು ಕೂಡ ತನಿಖಾಧಿಕಾರಿಗಳು ಪೆನ್ ಡ್ರೈವ್ ಸೇರಿದಂತೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಕುರಿತು ಹಲವು ಪ್ರಶ್ನೆಗಳನ್ನು ಕೇಳಲಿದ್ದಾರೆ. ಇದಾದ ಬಳಿಕ ಭಾನುವಾರ ಅಥವಾ ಸೋಮವಾರ ಪ್ರಜ್ವಲ್ ರನ್ನು ಸ್ಥಳ ಮಹಜರು ಪ್ರಕ್ರಿಯೆಗೆ ಹಾಸನದ ಹೊಳೆನರಸೀಪುರಕ್ಕೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.