ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಈ ಪೆನ್‌ಡ್ರೈವ್ ಹಂಚಿಕೆ ಮಾಡಿರುವ ಆರೋಪಿ ನವೀನ್ ಗೌಡ ಈ ಬಗ್ಗೆ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿ, ಡಿಲೀಟ್ ಮಾಡಿದ್ದಾರೆ. ಈ ಫೇಸ್ಬುಕ್ ಪೋಸ್ಟ್ ನಲ್ಲಿ ಅರಕಲಗೂಡು ಜೆಡಿಎಸ್ ಶಾಸಕ ಎ. ಮಂಜುಗೆ ನಾನು ಪೆನ್ ಡ್ರೈವ್ ಕೊಟ್ಟಿದ್ದೆ ಎಂದು ನವೀನ್ ಗೌಡ ಬರೆದುಕೊಂಡಿದ್ದಾರೆ.
ಪೆನ್ ಡ್ರೈವ್ ಬಗ್ಗೆ ಫೇಸ್ ಬುಕ್ ನಲ್ಲಿ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ ನಂತರ ನವೀನ್ ಗೌಡ, ತಕ್ಷಣ ಪೋಸ್ಟ್‌ನ್ನು ಡಿಲೀಟ್ ಮಾಡಿದ್ದಾರೆ .ಈ ಪೋಸ್ಟ್ ನಲ್ಲಿ ಅವರು ” ಏಪ್ರಿಲ್ 20 ರಂದು ನನಗೆ ರಸ್ತೆಯಲ್ಲಿ ಸಿಕ್ಕಿದ್ದ ಪೆನ್ ಡ್ರೈವ್ ಅನ್ನು ಏಪ್ರಿಲ್ 21 ಕ್ಕೆ ಅರಕಲಗೂಡು ಶಾಸಕರಾದ ಎ.ಮಂಜು ಅವರಿಗೆ ಅರಕಲಗೂಡಿನ ಮಾರುತಿ ಕಲ್ಯಾಣ ಮಂಟಪದಲ್ಲಿ ನೀಡಿದ್ದೇನೆ. ಕುಮಾರಸ್ವಾಮಿ ಅವರು ಹೇಳಿದ ಹಾಗೆ ವಿಡಿಯೋ ವೈರಲ್ ಹಿಂದೆ ಇರುವ ಮಹಾ ನಾಯಕ ಅರಕಲಗೂಡು ಶಾಸಕರೇ ಆಗಿರಬಹುದು ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅರಕಲಗೂಡು ಶಾಸಕ ಎ.ಮಂಜು, ನವೀನ್ ಗೌಡ ಯಾರು ಅಂತ ನನಗೆ ಗೊತ್ತೇ ಇಲ್ಲ .ನನಗೇ ಪೆನ್‌ಡ್ರೈವ್ ಕೊಟ್ಟಿದ್ದಾನೆಂದರೆ ಆತನೇ ಎಲ್ಲರಿಗೂ ಹಂಚಿಕೆ ಮಾಡುತ್ತಿದ್ದಾನೆ ಅನ್ನೋದು ಸ್ಪಷ್ಟವಾಗಿದೆ ಎಂದಿದ್ದಾರೆ. ಹಾಗೆ ಪೆನ್ ಡ್ರೈವ್ ನನಗೆ ಸಿಕ್ಕೇ ಇಲ್ಲ. ಕೊಟ್ಟೇ ಇಲ್ಲ ಅಂತ ತಮ್ಮ ಮೇಲಿನ ಆರೋಪಗಳಿಗೆ ಎ. ಮಂಜು ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎ.ಮಂಜು, ಮಾರುತಿ ಕಲ್ಯಾಣ ಮಂಟಪಕ್ಕೆ ಮದುವೆಗೆ ನಾನು ಹೋಗಿದ್ದಂತು ನಿಜ. ಮದುವೆಯಲ್ಲಿ ನೂರಾರು ಜನ ಇದ್ದರು. ಶಾಸಕ ಅಂತ ಎಲ್ಲರೂ ಬಂದು ನನ್ನನ್ನು ಮಾತನಾಡಿಸಿದ್ದಾರೆ. ಆದರೆ ಆ ಪೆನ್ ಡ್ರೈವ್ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಎಚ್.ಡಿ.ರೇವಣ್ಣ ಬಂಧನವನ್ನು ಖಂಡಿಸಿ ಪ್ರತಿಭಟನೆ ಮಾಡಿದಾಗಿನಿಂದ ನನ್ನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡಲಾಗುತ್ತಿದೆ ಎಂದಿದ್ದಾರೆ. ಈಗ ನವೀನ್ ಗೌಡ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿರುವುದರಿಂದ ಈತನ ವಿರುದ್ಧ ದೂರನ್ನು ಕೊಟ್ಟು, ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದಿದ್ದಾರೆ. ಅಲ್ಲದೇ ಎಸ್ ಐ ಟಿ ಅಧಿಕಾರಿಗಳು ಈತನನ್ನು ಬಂಧಿಸಿ ವಿಚಾರಣೆ ನಡೆಸಿದರೆ, ಸತ್ಯ ಬೇಗನೆ ಹೊರಬೀಳಲಿದೆ ಎಂದಿದ್ದಾರೆ.