ಬೆಂಗಳೂರು: ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ 33 ವರ್ಷದ ಪ್ರಜ್ವಲ್ ರೇವಣ್ಣಗೆ ಪುರುಷತ್ವ ಪರೀಕ್ಷೆ ನಡೆಸಲು SIT ಮುಂದಾಗಿದೆ. ಯಾಕಂದರೆ ಹಲವಾರು ಮಹಿಳೆಯರು, ಪ್ರಜ್ವಲ್ ರೇವಣ್ಣ ತಮಗೆ ಹೆದರಿಸಿ, ಬೆದರಿಸಿ, ಬ್ಲಾಕ್ ಮೇಲ್ ಮಾಡಿ ,ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು. ಹೀಗಾಗಿ ಆರೋಪಿ ಪ್ರಜ್ವಲ್ , ಲೈಂಗಿಕ ಕ್ರಿಯೆ ನಡೆಸಲು ಸಮರ್ಥನಾಗಿದ್ದಾನೆಯೇ ಎಂದು ಖಚಿತಪಡಿಸಿಕೊಳ್ಳಲು ಪುರುಷತ್ವ ಪರೀಕ್ಷೆ ಮಾಡಲಾಗುತ್ತದೆ.
ಅಶ್ಲೀಲ ಪೆನ್ ಡ್ರೈವ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ರಾತ್ರೋರಾತ್ರಿ ಜರ್ಮನಿಗೆ ಪರಾರಿಯಾಗಿದ್ದ ಆರೋಪಿ ಪ್ರಜ್ವಲ್, ಬರೋಬ್ಬರಿ 35 ದಿನಗಳ ಬಳಿಕ ನಿನ್ನೆ ತಡರಾತ್ರಿ ಬೆಂಗಳೂರಿಗೆ ವಾಪಾಸ್ ಬಂದಿದ್ದಾರೆ. ಜರ್ಮನಿಯಿಂದ ಸೀದಾ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ SIT ಅಧಿಕಾರಿಗಳು ವಶಕ್ಕೆ ಪಡೆದು ಕಚೇರಿಗೆ ಕರೆದುಕೊಂಡು ಹೋಗಿದ್ದರು. ರಾತ್ರಿಯೆಲ್ಲ ಕಚೇರಿಯಲ್ಲೇ ಕಾಲ ಕಳೆದ ನಂತರ ಬೆಳಗ್ಗೆ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಬಿಪಿ, ಶುಗರ್ , ಹಾರ್ಟ್ ಬೀಟ್ ಸೇರಿದಂತೆ ಇನ್ನಿತರ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಬಳಿಕ SIT ಅಧಿಕಾರಿಗಳು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಹಾಜರು ಪಡಿಸಿದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಜ್ವಲ್ ರೇವಣ್ಣರನ್ನು ಜೂನ್ 6ವರೆಗೆ SIT ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.