ಬೆಂಗಳೂರು: ಕೆ.ಆರ್.ನಗರ ಮಹಿಳೆಯ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಭವಿಷ್ಯ ಬುಧವಾರ(ಜುಲೈ 30) ನಿರ್ಧಾರವಾಗಲಿದೆ.ಕಳೆದ 14 ತಿಂಗಳಿನಿಂದ ಸೆರೆವಾಸದಲ್ಲಿರುವ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ನಾಳೆಯ ತೀರ್ಪು ಮಹತ್ವದ್ದಾಗಲಿದೆ.
ಮೂರು ಅತ್ಯಾಚಾರ ಪ್ರಕರಣ, ಒಂದು ಲೈಂಗಿಕ ದೌರ್ಜನ್ಯ ಹೀಗೆ ಒಟ್ಟು ನಾಲ್ಕು ಪ್ರಕರಣಗಳ ಪೈಕಿ ಒಂದು ಪ್ರಕರಣ ಈಗ ನಿರ್ಣಾಯಕ ಹಂತ ತಲುಪಿದ್ದು, ಬುಧವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ದೃಶ್ಯವಿದ್ದ ಪೆನ್ ಡ್ರೈವ್ಗಳನ್ನು ಹಾಸನ ಕ್ಷೇತ್ರದಾದ್ಯಂತ ಹಂಚಲಾಗಿತ್ತು. ಹೊಳೆನರಸೀಪುರದ ಮಹಿಳೆಯೊಬ್ಬರು ನೀಡಿದ್ದ ದೂರಿನ ಆಧಾರದ ತನಿಖೆ ಆರಂಭವಾಯಿತು. ಪ್ರಕರಣ ಸಂಬಂಧ 2024ರ ಮೇ 31ರಂದು ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದರು.