ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆದ ಬಳಿಕ ಮಾಜಿ ಸಚಿವ ರೇವಣ್ಣ ದೇಗುಲಗಳ ಭೇಟಿಯನ್ನು ಇದೀಗ ರದ್ದು ಮಾಡಿದ್ದಾರೆ. ದೇವರು, ಜ್ಯೋತಿಷ್ಯದ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿರುವ ರೇವಣ್ಣ, ಪತ್ನಿ ಭವಾನಿ ರೇವಣ್ಣ ಜೊತೆ ಇಂದು ತಮ್ಮ ತವರು ಜಿಲ್ಲೆ ಹಾಸನಕ್ಕೆ ಭೇಟಿ ನೀಡಿ, ಮನೆ ದೇವರು ದೇವೇಶ್ವರನ ದರ್ಶನ ಮಾಡುತ್ತಾರೆ , ಅಲ್ಲಿಂದ ಸಂಜೆ ಶೃಂಗೇರಿಗೆ ತೆರಳಿ ತಾಯಿ ಶಾರದಾಂಬೆಗೆ ಪೂಜೆ ಸಲ್ಲಿಸುತ್ತಾರೆ ಅಂತ ಹೇಳಲಾಗ್ತಿತ್ತು. ಆದರೆ ಕೊನೆ ಕ್ಷಣದಲ್ಲಿ ರೇವಣ್ಣ ಶೃಂಗೇರಿ ಸೇರಿದಂತೆ ಎಲ್ಲ ದೇವಸ್ಥಾನಗಳ ಭೇಟಿಯನ್ನು ರದ್ದು ಮಾಡಿದ್ದಾರೆ.
ಯಾಕಂದರೆ ರೇವಣ್ಣ ಬೆಂಗಳೂರಿನಲ್ಲೇ ಇದ್ದುಕೊಂಡು ,ಮಗ ಪ್ರಜ್ವಲ್ ರೇವಣ್ಣನವರಿಗೆ ಸಂಬಂಧಪಟ್ಟಂತೆ ಮುಂದಿನ ಕಾನೂನು ಹೋರಾಟ ಯಾವ ರೀತಿ ಮಾಡಬೇಕು ಅನ್ನೋದರ ಬಗ್ಗೆ ಚರ್ಚೆ ಮಾಡುತ್ತಿದ್ದಾರಂತೆ. ಹೀಗಾಗಿ ಕಾನೂನು ತಜ್ಞರ ಜೊತೆ ಸಭೆ ಇರುವುದರಿಂದ ವಿವಿಧ ದೇಗುಲಗಳ ಭೇಟಿಯನ್ನು ಬೆಳಗ್ಗಿನಿಂದ ಕ್ಯಾನ್ಸಲ್ ಮಾಡಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ನಂತರ ನಿನ್ನೆ ರಾತ್ರಿಯೇ (ಮೇ14 ) ರೇವಣ್ಣ ಮೈಸೂರಿಗೆ ತೆರಳಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಶಕ್ತಿದೇವತೆ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮೊದಲು ತನ್ನ ಮಗ ಪ್ರಜ್ವಲ್ ರೇವಣ್ಣ ಹೆಸರಿನಲ್ಲಿ ಅರ್ಚಕರಿಗೆ ಹೇಳಿ ಪೂಜೆ ಮಾಡಿಸಿ, ನಂತರ ಇಡೀ ಕುಟುಂಬದ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಆನಂತರ ತುಸು ಹೊತ್ತು ಗರ್ಭಗುಡಿಯಲ್ಲಿಯೇ ಶಾಂತವಾಗಿ ಕುಳಿತು ಧ್ಯಾನ ಮಾಡಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗುವ ಮೊದಲು ಬೆಂಗಳೂರಿನ ಬಸವನಗುಡಿಯ ಆಂಜನೇಯ ದೇಗುಲಕ್ಕೆ ಹೋಗಿ ಪ್ರಾರ್ಥನೆ ಮಾಡಿದ್ದಾರೆ.
ಮೈಸೂರಿನಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ರೇವಣ್ಣ , ನನ್ನನ್ನು ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದರು. ನ್ಯಾಯಾಂಗದ ಬಗ್ಗೆ ನನಗೆ ಗೌರವ ಇದೆ. ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದೇನೆ. ದೇವರು ಹಾಗೂ ರಾಜ್ಯದ ಜನರ ಮೇಲೆ ನಂಬಿಕೆ ಇದೆ. 40 ವರ್ಷದ ರಾಜಕೀಯದಲ್ಲಿ ನನ್ನ ಮೇಲೆ ಇದೇ ಮೊದಲ ಕೇಸ್ ಆಗಿರುವುದು. ಉದ್ದೇಶ ಪೂರ್ವಕವಾಗಿ ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ತಾಯಿ ಚಾಮುಂಡೇಶ್ವರಿ ಎಲ್ಲವನ್ನು ನೋಡಿಕೊಳ್ಳುತ್ತಾಳೆ. ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ನಾನು ಏನೂ ಮಾತನಾಡಲ್ಲ ಎಂದು ಹೇಳಿದರು.