ಬೆಂಗಳೂರು : ಕೆ ಆರ್ ನಗರದ ಮಹಿಳೆ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಚ್ ಡಿ ರೇವಣ್ಣಗೆ ಮತ್ತೊಂದು ರಿಲೀಫ್ ಸಿಕ್ಕಿದೆ. ಈ ಒಂದು ಪ್ರಕರಣದಲ್ಲಿ ಷರತ್ತು ಬದ್ಧ ಜಾಮೀನು ನೀಡಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಇದೀಗ ಷರತ್ತಿನಲ್ಲಿ ಸಡಿಲಿಕೆ ಮಾಡಿ ಆದೇಶ ಹೊರಡಿಸಿದೆ.

ಹೊರ ರಾಜ್ಯಗಳಿಗೆ ಸಂಚರಿಸಲು ಕೋರ್ಟ್ ಇದೀಗ ಎಚ್ಡಿ ರೇವಣ್ಣ ಅವರಿಗೆ ಅನುಮತಿ ನೀಡಿದೆ. ಆದರೆ ಕೋರ್ಟ್ ಅನುಮತಿ ಇಲ್ಲದೆ ದೇಶ ಬಿಟ್ಟು ತೆರಳದಂತೆ ಷರತ್ತನ್ನು ಮಾರ್ಪಾಡು ಮಾಡಲಾಗಿದೆ. ಈ ಕುರಿತು ಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದ್ದಾರೆ.

ಮೈಸೂರಿನ ಕೆ ಆರ್ ನಗರದ ಮಹಿಳೆಯನ್ನು HD ರೇವಣ್ಣ ಅಪಹರಣ ಮಾಡಿದ್ದಾರೆ ಎಂದು ಅಪಹರಣಕ್ಕೆ ಒಳಗಾದ ಮಹಿಳೆಯ ಮಗ ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದ. ಈ ಹಿನ್ನೆಲೆಯಲ್ಲಿ ಎಸ್ ಐ ಟಿ ಅಧಿಕಾರಿಗಳು ಎಚ್ಡಿ ರೇವಣ್ಣ ಅವರನ್ನು ಬಂಧಿಸಿದ್ದರು.ಸುಮಾರು 10 ದಿನಗಳ ಕಾಲ ಹೆಚ್ಡಿ ರೇವಣ್ಣ ಪರಪ್ಪನ ಅಗ್ರಹಾರದಲ್ಲಿ ಕಳೆದಿದ್ದರು.ಅದಾದ ಬಳಿಕ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶರತ್ತು ಬದ್ಧ ಜಾಮೀನು ನೀಡಿತ್ತು. ಇದೀಗ ಜಮೀನಿನಲ್ಲಿ ಶರತ್ತುಗಳನ್ನು ಸಡಿಲಿಕೆ ಮಾಡಿ ಕೋರ್ಟ್ ಆದೇಶಿಸಿದೆ.
