ಹುಬ್ಬಳ್ಳಿ; ದೇಶಾದ್ಯಂತ ಸದ್ದು ಮಾಡಿದ ನೇಹಾ ಹಿರೇಮಠ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೆ ಹುಬ್ಬಳ್ಳಿಯಲ್ಲಿ ಅದೇ ರೀತಿ ಇನ್ನೊಬ್ಬ ಯುವತಿ ಭೀಕರವಾಗಿ ಕೊಲೆಯಾಗಿದ್ದಾಳೆ. ಹುಬ್ಬಳ್ಳಿಯ ವೀರಾಪುರ ಓಣಿಯ ನಿವಾಸಿ ಅಂಜಲಿ ಕೊಲೆಯಾದ ಯುವತಿ. ಯಲ್ಲಾಪುರ ಓಣಿಯ ಗಿರೀಶ (ವಿಶ್ವ) ಎಸ್. ಸಾವಂತ ಎಂಬಾತನೇ ಯುವತಿಯನ್ನು ಕೊಲೆಗೈದ ಪಾಗಲ್ ಪ್ರೇಮಿ.
ಅಂಜಲಿ ಹಾಗೂ ಗಿರೀಶ್ ಇಬ್ಬರೂ ಸಹಪಾಠಿಗಳು. ಆರೋಪಿ ಗಿರೀಶ ಅಂಜಲಿಯನ್ನು ಪ್ರೀತಿಸುವಂತೆ ಬಹಳ ದಿನಗಳಿಂದ ಪೀಡಿಸುತಿದ್ದ. ಆದ್ರೆ ಅಂಜಲಿ ಒಪ್ಪಿರಲಿಲ್ಲ. ಇತ್ತೀಚೆಗಷ್ಟೇ ಅಂಜಲಿಯನ್ನು ಮೈಸೂರಿಗೆ ಹೋಗೋಣ ಬಾ ಅಂತ ಕರೆದಿದ್ನಂತೆ. ಆಗ ಅಂಜಲಿ ಒಪ್ಪದಿದ್ದಕ್ಕೆ ನೇಹಾಳಂತೆ ನಿನ್ನನ್ನೂ ಕೊಲ್ತೀನಿ ಅಂತ ಬೆದರಿಕೆ ಹಾಕಿದ್ನಂತೆ. ಈ ಬಗ್ಗೆ ಅಂಜಲಿ ಮನೆಯವರಿಗೆ ತಿಳಿಸಿದ್ಳು. ಇದ್ರಿಂದ ಭಯಗೊಂಡಿದ್ದ ಅಂಜಲಿ ಸಹೋದರಿ ಹಾಗೂ ಅಜ್ಜಿ ಅಂದೇ ಪೊಲೀಸರಿಗೆ ಮಾಹಿತಿ ನೀಡಿದ್ರಂತೆ. ಆದರೆ ಇಂದು ಮುಂಜಾನೆ ದಿಢೀರ್ ಅಂಜಲಿ ಮನೆಗೆ ಬಂದ ಆರೋಪಿ ಬಾಗಿಲು ಬಡಿದಿದ್ದು, ಸಹೋದರಿ ಬಾಗಿಲು ತೆಗೆಯುತ್ತಿದ್ದಂತೆ, ಒಳಗೆ ನುಗ್ಗಿ ಮಲಗಿದ್ದ ಅಂಜಲಿ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಅಷ್ಟಕ್ಕೇ ಸಮಾಧಾನಗೊಳ್ಳದೇ ಮನೆಯ ತುಂಬಾ ಎಳೆದಾಡಿ ಅಂಜಲಿಗೆ ಚಾಕುವಿನಿಂದ ಚುಚ್ಚಿಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಭೀಕರ ದೃಶ್ಯವನ್ನು ಕಣ್ಣಾರೆ ಕಂಡ ಅಂಜಲಿ ಸಹೋದರಿ ಹಾಗೂ ಅಜ್ಜಿ ಹೌಹಾರಿದ್ದಾರೆ. ಇಬ್ಬರೂ ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಇನ್ನು ಅಂಜಲಿ ಸಾವಿಗೆ ಪೊಲೀಸರ ನಿರ್ಲಕ್ಷವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಅಂಜಲಿ ಸಾವಿಗೆ ನ್ಯಾಯ ಸಿಗಬೇಕು ಅಂತ ಪಟ್ಟು ಹಿಡಿದಿದ್ದಾರೆ