ಮೈಸೂರು: ಮೈಸೂರಿನ ಶಾಂತಿನಗರದಲ್ಲಿ ಹದಿಹರೆಯದ ನಾಲ್ವರು ಪುಂಡ ಯುವಕರು ಮಚ್ಚು ಲಾಂಗು ಝಳಪಿಸಿ ಯುವಕನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.ಗುರಾಯಿಸಿದ ಅನ್ನೋ ಒಂದೇ ಒಂದು ಕ್ಷುಲ್ಲಕ ಕಾರಣಕ್ಕೆ ಪುಂಡ ಯುವಕರು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮೃತಪಟ್ಟ ಯುವಕನನ್ನು 18 ವರ್ಷದ ಅರ್ಬಾಜ್ ಖಾನ್ ಎಂದು ಗುರುತಿಸಲಾಗಿದೆ.

ಘಟನೆ ವಿವರ
ನಿನ್ನೆ ಮೈಸೂರಿನ ಶಾಂತಿನಗರದ ಲಾಲ್ ಮಸೀದಿ ಬಳಿ ಅರ್ಬಾಜ್ ಖಾನ್ ನಿಂತುಕೊಂಡಿದ್ದನಂತೆ . ಅಲ್ಲೇ ಪಕ್ಕದಲ್ಲೆ ಶಾದಿಲ್, ಶಹಬಾಜ್, ಶೋಯಬ್ ಹಾಗೂ ಸಾಹಿಲ್ ಎಂಬ ಯುವಕರು ಕೂಡಾ ನಿಂತುಕೊಂಡಿದ್ದರು. ಈ ವೇಳೆ ವಿನಾ ಕಾರಣ ಅರ್ಬಾಜ್ ಖಾನ್ ಜೊತೆ ಕ್ಯಾತೆ ತೆಗೆದಿದ್ದಾರೆ. ನೀನು ನಮ್ಮನ್ನು ಯಾಕೆ ಗುರಾಯಿಸಿಕೊಂಡು ನೋಡ್ತಾ ಇದ್ದೀಯ ಅಂತ ಆವಾಜ್ ಹಾಕಿದ್ದಾರೆ. ಹೀಗೆ ಮಾತಿಗೆ ಮಾತು ಬೆಳೆದು ಸಿಟ್ಟಿಗೆದ್ದ ನಾಲ್ವರು ಯುವಕರು ಸೇರಿ 18 ವರ್ಷದ ಅರ್ಬಾಜ್ ಖಾನ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಪರಿಣಾಮ ಅರ್ಬಾಜ್ ಖಾನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೊಲೆ ಮಾಡಿದ ನಂತರ ಆರೋಪಿಗಳು ಪರಾರಿಯಾಗಿದ್ದಾರೆ.

ಘಟನೆ ವೇಳೆ ಆರೋಪಿ ಶಹಬಾಜ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮೈಸೂರಿನ ಶಾಂತಿನಗರದಲ್ಲಿ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ. ಹೀಗಾಗಿ ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮವನ್ನು ಜರುಗಿಸಬೇಕು ಅಂತ ಸ್ಥಳೀಯರು ಆಗ್ರಹಿಸಿದ್ದಾರೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.