ಹಾಸನ: ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಶಿರಾಡಿ ಘಾಟ್ ಮಾರ್ಗವನ್ನ ಬಂದ್ ಮಾಡಲಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಎನ್ ಹೆಚ್ 75ರ ಡಬಲ್ ಟರ್ನ್ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ಸಿಗದೇ ಟ್ಯಾಂಕರ್ ಪಲ್ಟಿಯಾಗಿದೆ.
ಟ್ಯಾಂಕರ್ ಪಲ್ಟಿಯಾಗಿ ಎಲ್ಪಿಜಿ ಗ್ಯಾಸ್ ಸೋರಿಕೆಯಾಗುತ್ತಿದ್ದು , ಮುಂಜಾಗೃತ ಕ್ರಮವಾಗಿ ಹೆದ್ದಾರಿ ಬಂದ್ ಮಾಡಲಾಗಿದೆ. ಗ್ಯಾಸ್ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿದಂತೆ ಅಗ್ನಿಶಾಮಕದಳದ ಸಿಬ್ಬಂದಿ ಹಅಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಹೆದ್ದಾರಿ ಬಂದ್ ಆದ ಪರಿಣಾಮ ಚಾಲಕರು ಮಾರ್ಗಮಧ್ಯೆಯೇ ವಾಹನಗಳನ್ನ ನಿಲ್ಲಿಸಿಕೊಂಡಿದ್ದಾರೆ.

ಮುಂಜಾಗೃತ ಕ್ರಮವಾಗಿ ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್ ಮಾಡಿರೊ ಪರಿಣಾಮ, ಬೆಂಗಳೂರು-ಮಂಗಳೂರು-ಧರ್ಮಸ್ಥಳಕ್ಕೆ ಸಂಚರಿಸುವ ವಾಹನಗಳನ್ನ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ. ಮೂಡಿಗೆರೆ ಮೂಲಕ ಚಾರ್ಮಾಡಿ ಘಾಟ್ ಬಳಸಿ ಉಜಿರೆಗೆ ತೆರಳಿ ಮಂಗಳೂರು-ಧರ್ಮಸ್ಥಳದ ಕಡೆ ವಾಹನ ಸವಾರರು ತೆರಳುವಂತೆ ಮಾಹಿತಿ ನೀಡಲಾಗಿದೆ.