ಮಂಡ್ಯ : ಎರಡು ಬೈಕ್ಗಳ ನಡುವೆ ಅಪಘಾತ ಸಂಭವಿಸಿ ಇಂಜಿನಿಯರ್ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಸಾಪುರ ಗೇಟ್ ಬಳಿ ನಡೆದಿದೆ.
ಶರಣ್ಯ ಗೌಡ(25) ಮೃತ ಮಹಿಳಾ ಇಂಜಿನಿಯರ್. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಳೆಹೊನ್ನಿಗನ ಗ್ರಾಮದ ಶರಣ್ಯ, ನರೇಗಾ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲಸ ಮುಗಿಸಿ ಬಳೆಹೊನ್ನಿಗನದಿಂದ ಹಲಗೂರಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ತೀವ್ರ ರಸ್ತಸ್ರಾವದಿಂದ ಶರಣ್ಯ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂದಿನ ತಿಂಗಳು ಮದ್ವೆ ನಿಗಧಿಯಾಗಿತ್ತು : ಶರಣ್ಯ ಗೌಡಗೆ ಫೆಬ್ರವರಿ 16ರಂದು ಮದುವೆ ನಿಶ್ಚಯವಾಗಿತ್ತು. ದಾಂಪತ್ಯದ ಸುಂದರ ಕನಸು ಹೊತ್ತು ದಿನಗಣನೆಯಲ್ಲಿದ್ದ ಶರಣ್ಯ ನವಜೀವನಕ್ಕೆ ಕಾಲಿಡುವ ಮೊದಲೇ ದುರಂತ ಅಂತ್ಯ ಕಂಡಿದ್ದಾರೆ. ಕಳೆದ ಒಂದು ವರ್ಷದಿಂದ ಕನಕಪುರ ತಾಲೂಕಿನ ಸಾತನೂರು ಪಂಚಾಯಿತಿಯಲ್ಲಿ ನರೇಗಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಮದುವೆಗೆ ಬೇಕಾದ ಸಿದ್ಧತೆ ಮಾಡಿಕೊಂಡಿದ್ದರು. ಸಂಭ್ರಮವಿರಬೇಕಾದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.
