ಮಹಿಳೆ ಸಾಯಿಸಿ ಚೀಲದಲ್ಲಿ ಬಚ್ಚಿಟ್ಟ ಕಾಡಾನೆ: ಭುಗಿಲೆದ್ದ ಪ್ರತಿಭಟನೆ, ಉದ್ವಿಗ್ನ ಪರಿಸ್ಥಿತಿ
ಹಾಸನ/ ಬೇಲೂರು: ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿ ಪ್ರಕರಣ ಮುಂದುವರಿದಿದೆ. ಬೇಲೂರು ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಘಟನೆ ನಡೆದಿದ್ದು, ಕಾಫಿ ತೋಟದಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯನ್ನ ಕಾಡಾನೆ ಬಲಿ ತೆಗೆದುಕೊಂಡುಬಿಟ್ಟಿದೆ. 63 ವರ್ಷದ ಸುಶೀಲಮ್ಮ ಸಾವನ್ನಪ್ಪಿರುವ ಮಹಿಳೆ. ತಲೆಯನ್ನ ಚಚ್ಚಿ ಒಡೆದು ಹಾಕಿರುವ ಕಾಡಾನೆ, ಆ ಬಳಿಕ ಮಹಿಳೆಯ ಶವವನ್ನ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಸ್ಥಳದಿಂದ ಎಸ್ಕೇಪ್ ಆಗಿದೆ. ಘಟನೆಯ ಭೀಕರತೆಯನ್ನ ನೋಡಿದ ಜನರು, ಅರಣ್ಯ ಇಲಾಖೆ, ಜಿಲ್ಲಾಡಳಿತ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ.

ಟೈರ್ ಗೆ ಬೆಂಕಿ ಹಚ್ಚಿ ರಸ್ತೆ ತಡೆದು ಪ್ರತಿಭಟನೆ
ಅಂದಾಗೆ ಕಳೆದ 2 ತಿಂಗಳಲ್ಲಿ ಇದು ನಾಲ್ಕನೇ ಪ್ರಕರಣವಾಗಿದ್ದು, ಕಾಡಾನೆ ನಿಯಂತ್ರಿಸಿಲು ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಅರಣ್ಯ ಇಲಾಖೆಯ ವೈಫಲ್ಯ ಖಂಡಿಸಿ ನೂರಾರು ಜನರು ಆಕ್ರೋಶ ವ್ಯಕ್ತಪಡಿಸಿದ್ರು, ರಸ್ತೆ ತಡೆದು ಪ್ರತಿಭಟನೆ ನಡೆಸ್ತಾ ಇದ್ದಾರೆ. ಈ ವೇಳೆ ಬಸ್ ಚಾಲಕ ಬಸ್ ಚಲಾಯಿಸಲು ಮುಂದಾದಾಗ ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡ ಪ್ರಸಂಗ ಕೂಡ ನಡೆಯಿತು. ಅಲ್ಲದೇ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಅರಣ್ಯ ಸಚಿವರು ಕೂಡಲೇ ಸ್ಥಳಕ್ಕೆ ಬರಬೇಕು ಅಂತಾ ಆಗ್ರಹಿಸಿದ್ರು. ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರಿನಲ್ಲಿ ನಿರಂತರ ಕಾಡಾನೆ ದಾಳಿ ನಡೆದ್ರೂ ಅರಣ್ಯ ಸಚಿವರು ಕಾಡಾನೆ ನಿಯಂತ್ರಿಸುವ ಕುರಿತು ಗಮನವೇ ವಹಿಸುತ್ತಿಲ್ಲ ಅಂತಾ ಆಕ್ರೋಶ ಹೊರಹಾಕಿದ್ರು.
ಸ್ಥಳಕ್ಕೆ ಬಂದ ಡಿಸಿ ಸತ್ಯಭಾಮ, ಪ್ರತಿಭಟನಾಕಾರರ ಆಕ್ರೋಶ, ಡಿಸಿ ಮೌನ
ಯಾವಾಗ ಕಾಡಾನೆ ದಾಳಿ ನಡೆಯಿತು ಅನ್ನೋದು ಗೊತ್ತಾಯ್ತೋ ಡಿಸಿ ಸತ್ಯಭಾಮ ಎದ್ನೋ, ಬಿದ್ನೋ ಅಂತಾ ಸ್ಥಳಕ್ಕೆ ಓಡಿ ಬಂದ್ರು. ಪ್ರತಿಭಟನಾಕಾರರನ್ನ ಸಮಧಾನಪಡಿಸಲು ಯತ್ನಿಸಿದ್ರೂ ಧರಣಿ ನಿರತ ಜನರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಅಲ್ಲದೇ ಸ್ವತಃ ಡಿಸಿ ಸತ್ಯಭಾಮ ಅವರ ಮೇಲೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ರು. ಕೊನೆಗೆ ಪ್ರತಿಭಟನಾಕಾರರ ಆಕ್ರೋಶ ಎದುರಿಸಲಾರದೇ ಡಿಸಿ ಮೌನಕ್ಕೆ ಜಾರಿದ್ರು. ಈ ವೇಳೆ ಡಿಸಿ ಸತ್ಯಭಾಮಗೆ ಬೇಲೂರು ತಹಶೀಲ್ದಾರ್ ಮಮತಾ ಸಾಥ್ ನೀಡಿದ್ರು.
ಕಳೆದ 2 ವಾರದ ಹಿಂದೆಯೂ ಬೇಲೂರು ತಾಲೂಕಿನ ಗುಜ್ಜನಹಳ್ಳಿ ಎಂಬ ಗ್ರಾಮದಲ್ಲಿ 33 ವರ್ಷದ ಅನಿಲ್ ಕುಮಾರ್ ಎಂಬ ಯುವಕನನ್ನ ಕಾಡಾನೆ ಬಲಿಪಡೆದಿತ್ತು.ಆ ಘಟನೆ ಮಾಸುವ ಮುನ್ನವೇ ಇದೀಗ ಮತ್ತೆ ಮತ್ತೊಂದು ಘಟನೆ ನಡೆದಿರೋದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
