ಅಜ್ಜಂಪುರ: 2018ರ ಬಳಿಕ ಅಸ್ತಿತ್ವಕ್ಕೆ ಬಂದ ಪಟ್ಟಣ ಪಂಚಾಯಿತಿಗೆ ಮೊದಲ ಬಾರಿ ನಡೆಯುತ್ತಿರುವ ಚುನಾವಣೆಗೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ.
11 ವಾರ್ಡ್‌ಗಳಲ್ಲೂ ಚುನಾವಣೆ ಎದುರಿಸಲು ಮೂರೂ ಪಕ್ಷಗಳು ಸಿದ್ಧತೆ ನಡೆಸಿವೆ. ಕಾಂಗ್ರೆಸ್ ಏಕಾಂಗಿಯಾಗಿ ಹಾಗೂ ಬಿಜೆಪಿ– ಜೆಡಿಎಸ್ ಜೊತೆಗೂಡಿ ಚುನಾವಣೆಗೆ ಸಜ್ಜಾಗಿದೆ.
ಜಾತಿ, ವೈಯಕ್ತಿಕ ವರ್ಚಸ್ಸು, ಸಮಾಜ ಸೇವೆ, ಜನಸೇವೆ, ರಾಜಕೀಯ ಅನುಭವ, ಮತದಾರರ ಒಲವು, ಸಂಘ ಸಮಾಜದೊಳಗಿನ ಪಾಲ್ಗೊಳ್ಳುವಿಕೆಯನ್ನು ಅಳೆದು ತೂಗಿ ಪಕ್ಷಗಳು ಟಿಕೆಟ್ ಆಖೈರುಗೊಳಿಸುತ್ತಿವೆ. 1 ಮತ್ತು 11ನೇ ವಾರ್ಡ್ ಹೊರತುಪಡಿಸಿ, ಉಳಿದ ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಎರಡು ಪಕ್ಷಗಳೂ ಅಂತಿಮಗೊಳಿಸಿವೆ. ಸೋಮವಾರ ಪಕ್ಷಗಳು ‘ಬಿ’ ಫಾರಂ ವಿತರಿಸಲಿವೆ. ಆ ಬಳಿಕವೇ ಅಭ್ಯರ್ಥಿಗಳು ಅಧಿಕೃತವಾಗಿ ಪಕ್ಷದ ಚಿಹ್ನೆಯಡಿ ನಾಮಪತ್ರ ಸಲ್ಲಿಸಲಿದ್ದಾರೆ.
1 ಮತ್ತು 11ನೇ ವಾರ್ಡ್‌ಗೆ ಅಭ್ಯರ್ಥಿಗಳನ್ನು ಎರಡೂ ಪಕ್ಷಗಳು ಅಂತಿಮಗೊಳಿಸಿಲ್ಲ. ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿವೆ. ನಾಮಪತ್ರ ಸಲ್ಲಿಕೆಗೆ ಮಂಗಳವಾರವೇ (ಆ.5) ಕಡೆಯ ದಿನ ಆಗಿದ್ದು, ಟಿಕೆಟ್ ಅಂತಿಮಗೊಳಿಸುವ ಒತ್ತಡ ಎರಡೂ ಪಕ್ಷಗಳಿಗಿದೆ.
ಟಿಕೆಟ್ ಖಾತ್ರಿಯಾಗಿರುವ ಆಕಾಂಕ್ಷಿಗಳು, ಸ್ಥಳೀಯ ಮುಖಂಡರೊಂ ದಿಗೆ ಜನರ ಮನೆಬಾಗಿಲಿಗೆ ಮತಯಾಚನೆಯಲ್ಲಿ ತೊಡಗಿದ್ದಾರೆ.