ಚಿಕ್ಕಮಗಳೂರು: ಚಿಕ್ಕಮಗಳೂರು: ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ನಿದ್ರೆ ಮಾತ್ರೆ ಹಾಕಿ ತನ್ನ ಅತ್ತೆಯನ್ನೇ ಕೊಲೆ ಮಾಡಿದ ಪ್ರಕರಣವನ್ನು ಅಜ್ಜಂಪುರ ಪೊಲೀಸರು ಬಯಲಿಗೆಳೆದಿದ್ದಾರೆ.
ಅಜ್ಜಂಪುರ ತಾಲ್ಲೂಕು ಶಿವನಿಯ ದೇವೀರಮ್ಮ(75) ಕೊಲೆಯಾದ ವೃದ್ಧೆಯಾಗಿದ್ದಾರೆ. ಆಕೆಯ ಸೊಸೆ ಅಶ್ವಿನಿ ಮತ್ತು ಆಕೆಯ ಪ್ರಿಯಕರ ಆಂಜನೇಯ ಬಂಧಿತ ಆರೋಪಿಗಳಾಗಿದ್ದಾರೆ.
ಪತಿ ಇದ್ದರೂ ಆಂಜನೇಯನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಅಶ್ವಿನಿ ಮನೆಯಲ್ಲಿದ್ದ ತಮ್ಮ ಅತ್ತೆ ದೇವೀರಮ್ಮ ಅವರಿಗೆ ಸೇರಿದ ಬೀರುವಿನಲ್ಲಿದ್ದ ಹಣ ಮತ್ತು ಚಿನ್ನಾಭರಣವನ್ನು ನಕಲಿ ಕೀಲಿ ಬಳಸಿ ಆಗಾಗ ಕದ್ದು ತನ್ನ ಪ್ರಿಯಕರನಿಗೆ ನೀಡುತ್ತಿದ್ದಳು. ಹೀಗೆ ಸುಮಾರು 65 ಸಾವಿರ ರೂ. ನಗದು ಮತ್ತು 20 ಲಕ್ಷ ರೂ.ಬೆಲೆ ಬಾಳುವ ಚಿನ್ನಾಭರವಣವನ್ನು ಎಗರಿಸಿದ್ದಳು.
ಈ ವಿಚಾರ ದೇವೀರಮ್ಮ ಅವರಿಗೆ ಗೊತ್ತಾಗುತ್ತಿದ್ದಂತೆ ಆಕೆಯನ್ನು ಮುಗಿಸಲು ತೀರ್ಮಾನಿಸಿದ ಅಶ್ವಿನಿ ಮತ್ತು ಆಂಜನೇಯ ಆಗಸ್ಟ್ 10 ರಂದು ರಾತ್ರಿ ರಾಗಿ ಮುದ್ದೆಯಲ್ಲಿ ಸುಮಾರು 20 ನಿದ್ರೆ ಮಾತ್ರೆಗಳನ್ನು ಬೆರೆಸಿ ದೇವೀರಮ್ಮ ಅವರಿಗೆ ತಿನ್ನಿಸಿ ಕೊಲೆ ಮಾಡಿ ಶವ ಸಂಸ್ಕಾರ ನಡೆಸಲಾಗಿದೆ.
ಬೀರುವಿನಲ್ಲಿದ್ದ ನಗದು, ಚಿನ್ನಾಭರಣ ಕಾಣೆಯಾಗಿರುವ ಬಗ್ಗೆ ದೇವೀರಮ್ಮನ ಮಗಳು ವೀಣಾ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಅನುಮಾನಗೊಂಡು ಅಶ್ವಿನಿಯನ್ನು ವಿಚಾರಣೆಗೊಳಪಡಿಸಿದಾಗ ಇಡೀ ಸಂಚು ಬಯಲಾಗಿದೆ ಒಂದೆರಡು ದಿನಗಳಲ್ಲಿ ದೇವೀರಮ್ಮನವರ ಶವವನ್ನು ಹೊರಕ್ಕೆ ತೆಗೆದು ಮರಣೋತ್ತರ ಪರಿಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
