ಬಾಳೆಹೊನ್ನೂರು: ಆನೆ ದಾಳಿಗೆ ಕಾಫಿನಾಡಲ್ಲಿ ಮತ್ತೊಂದು ಬಲಿಯಾಗಿದೆ. ಎನ್‍ಆರ್‌ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಂಡುವಾನೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮೇಲೆ ಆನೆ ದಾಳಿ ಮಾಡಿ, ಕೊಂದು ಹಾಕಿದೆ.
ಮೃತರನ್ನು ಸುಬ್ರಾಯಗೌಡ (65) ಎಂದು ಗುರುತಿಸಲಾಗಿದೆ. 4 ದಿನದ ಅಂತರದಲ್ಲಿ ಇದು 2ನೇ ಸಾವಾಗಿದ್ದು, ಕಳೆದ ಗುರುವಾರವಾಷ್ಟೆ ಅನಿತಾ (25) ಎಂಬವರು ಆನೆ ದಾಳಿಗೆ ಬಲಿಯಾಗಿದ್ದರು. 4 ದಿನ ಕಳೆಯುವಷ್ಟರಲ್ಲಿ ಈಗ ಮತ್ತೊಂದು ಬಲಿಯಾಗಿದೆ.
ಭಾನುವಾರ ರಾತ್ರಿ ಕಾಡಾನೆ ತೋಟದ ಒಳಗೆ ದಾಟುವ ವೇಳೆ ಐಬೆಕ್ಸೆ ಬೇಲಿಗೆ ತಗುಲಿ ಕೂಗಿದೆ. ಯಾವುದೋ ಪ್ರಾಣಿ ಕೂಗಿದ ಶಬ್ದ ಕೇಳಿ ಸುಬ್ರಾಯಗೌಡ ಹೊರ ಬಂದು ಬೇಲಿಯ ಬಳಿ ತೆರಳುತ್ತಿದ್ದಂತೆ ಸ್ಥಳದಲ್ಲಿದ್ದ ಕಾಡಾನೆ ಕಾಲಿನಿಂದ ತುಳಿದು ಸಾಯಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ವಿವಿಧ ರೈತ ಸಂಘಟನೆಗಳು ಸೋಮವಾರ ಬಾಳೆಹೊನ್ನೂರು ಬಂದ್, ರಸ್ತೆ ತಡೆ ನಡೆಸಿ ನೂರಾರು ಜನರಿಂದ ಪ್ರತಿಭಟನೆ!
ಭಾನುವಾರ ಮೂಡಿಗೆರೆ-ಬೇಲೂರು ಗಡಿಯಲ್ಲಿ 25 ಆನೆಗಳು ಕಾಣಿಸಿಕೊಂಡಿದ್ದವು. ಮೇಲಿಂದ ಮೇಲೆ ಆನೆ ದಾಳಿ ಪ್ರಕರಣ ಕಂಡು ಮಲೆನಾಡಿಗರು ಕಂಗಾಲಾಗಿದ್ದಾರೆ.
ಆನೆ ದಾಳಿ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.