ಬಾಳೆಹೊನ್ನೂರು: ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಸಂವಿಧಾನಕ್ಕೆ ಅಪಮಾನವೆಸಗಿದ ರಾಜ್ಯಪಾಲರನ್ನು ವಾಪಾಸ್ ಕರೆಸಿಕೊಳ್ಳಲು ರಾಜ್ಯಪಾಲ ಹಠಾವೋ-ಕರ್ನಾಟಕ ಬಚಾವೋ ಆಂದೋಲನವನ್ನು ಶುಕ್ರವಾರ ಬಾಳೆಹೊನ್ನೂರು ಯುವ ಕಾಂಗ್ರೆಸ್ ವತಿಯಿಂದ ನಡೆಸಲಾಯಿತು.

ಈ ವೇಳೆ ಮಾತನಾಡಿದ ಬಾಳೆಹೊನ್ನೂರು ಯುವ ಕಾಂಗ್ರೆಸ್ ಅಧ್ಯಕ್ಷರಾದ ರತನ್ ಗೌಡ ಅರಗಿ ಭಾರತದ ಸಂವಿಧಾನದಂತೆ ಯಾವುದೇ ರಾಜ್ಯದ ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಸಚಿವ ಸಂಪುಟ ಸಿದ್ಧಪಡಿಸುವ ಭಾಷಣವನ್ನು ರಾಜ್ಯಪಾಲರು ಮಾಡಬೇಕಾಗುತ್ತದೆ. ಆದರೆ, ನಿನ್ನೆ ದಿನ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‍ರವರು ಸಲ್ಲದ ಕಾರಣ ನೀಡಿ, ತಮ್ಮ ಭಾಷಣವನ್ನು ಮೊಟಕುಗೊಳಿಸಿ ಸಂವಿಧಾನಕ್ಕೆ ಅಪಮಾನವೆಸಗಿದ್ದಾರೆ.
ರಾಜ್ಯಪಾಲರು ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುತ್ತಾರೆಯೇ ಹೊರತು, ಕೇಂದ್ರಸರ್ಕಾರದ ಅಡಿಯಲ್ಲಿ ಅಲ್ಲ. ನಿನ್ನೆ ದಿನ ರಾಜ್ಯಪಾಲರು ನಡೆದುಕೊಂಡಿರುವ ರೀತಿ ಅವರು ಕೇಂದ್ರ ಸರ್ಕಾರದ ಬಾಲಬುಡುಕರೆನ್ನುವುದನ್ನು ಸಾಬೀತು ಪಡಿಸಿದೆ.
ವರ್ಷದ ಮೊದಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದು ರೂಢಿ. ಈ ಭಾಷಣದಲ್ಲಿ ಆಕ್ಷೇಪಾರ್ಹ ಸಾಲುಗಳಿವೆ ಎಂದು ಕ್ಷುಲ್ಲಕ ಕಾರಣ ನೀಡಿ, ಆಡಳಿತಾರೂಢ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸವನ್ನು ಸ್ವತಃ ರಾಜ್ಯಪಾಲರೇ ಮಾಡಿರುವುದು ಇದೇ ಮೊದಲ ಬಾರಿ. ಇಂತಹ ನಡೆ ಸಂವಿಧಾನಕ್ಕೆ ಮಾರಕವಾಗಿದೆ. ರಾಜ್ಯಪಾಲರು ಭಾಷಣ ಮಾಡುವ ಮೂಲಕ ಸದನದ ಗಾಂಭೀರ್ಯವನ್ನು ಕಾಪಾಡಬೇಕು. ಆದರೆ ಅವರ ನಡೆಯೇ ಸದನದಲ್ಲಿ ಗದ್ದಲಕ್ಕೆ ಕಾರಣವಾಗಿದೆ.
ಇಂತಹ ರಾಜ್ಯಪಾಲರು ನಮಗೆ ಬೇಡ. ಕೂಡಲೇ ರಾಷ್ಟ್ರಪತಿಗಳು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರನ್ನು ವಾಪಾಸ್ ಕರೆಸಿಕೊಳ್ಳಬೇಕು. ಅದಕ್ಕಾಗಿ ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ರಾಜ್ಯಪಾಲ ಹಠಾವೋ-ಕರ್ನಾಟಕ ಬಚಾವೋ ಆಂದೋಲನ ನಡೆಸುತ್ತಿದ್ದೇವೆ. ಕೂಡಲೇ ಅವರನ್ನು ವಾಪಾಸ್ ಕರೆಸಿಕೊಳ್ಳದಿದ್ದರೆ ಯುವ ಕಾಂಗ್ರೆಸ್ ಉಗ್ರ ಪ್ರತಿಭಟನೆ ನಡೆಸುತ್ತದೆ ಎಂದು ಈ ಮೂಲಕ ತಿಳಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಬಾಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೇರ್ಬೈಲ್ ನಟರಾಜ್ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಜಿತ್ ಗೌಡ ದಂಡಿನಮಕ್ಕಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಬೆನ್ನಿ, ಕೆಡಿಪಿ ಸದಸ್ಯರುಗಳಾದ ಕೆ ವಿ ಸಾಜು, ಮಾಲೂರು ದಿಣ್ಣೆ ರಮೇಶ್ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ಇಸಿ ಜಾಯ್, ಬ್ಲಾಕ್ ಕಾಂಗ್ರೆಸ್ ಸುನಿಲ್ ಕುಮಾರ್ , ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಅಭಿಲಾಶ್ ಎಂಪಿ ಮತ್ತು ಅಕ್ಸಿರ ಕ್ಷೇತ್ರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಕಿರಣ್ ವರ್ಕಾಟೆ, ನಗರ ಕಾಂಗ್ರೆಸ್ ಅಧ್ಯಕ್ಷರಾದ ಉಪೇಂದ್ರ ಬೀಳಲ್ ಮನೆ, ನಗರ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ವಿಜಯ್, ಹೊನ್ನೇ ಕೊಡುಗೆ ಗ್ರಾಮ ಪಂಚಾಯತ್ ಸದಸ್ಯರಾದ ಮಂಜುನಾಥ್ ಹಾಗೂ ಇನ್ನೂ ಅನೇಕ ಕಾಂಗ್ರೆಸ್ ಮುಖಂಡರು ಯುವ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
