ಚಿಕ್ಕಮಗಳೂರು: ಕಳೆದೊಂದು ವಾರದಿಂದ ಮಲೆನಾಡಿಗರಲ್ಲಿ ಆತಂಕ ಸೃಷ್ಟಿಸಿರುವ ಕಾಡಾನೆ ಶುಕ್ರವಾರ ನರಸೀಪುರ ಗ್ರಾ.ಪಂ. ವ್ಯಾಪ್ತಿಯ ಕುಂಚೂರಿನ ಜಮೀನಿಗೆ ನುಗ್ಗಿ ಅಡಿಕೆ, ಬಾಳೆಗೆ ಹಾನಿ ಮಾಡಿದೆ. ಜೊತೆಗೆ ನಾಟಿ ಮಾಡಲು ಅಗಡಿಯಲ್ಲಿ ಸಿದ್ಧಪಡಿಸಿದ್ದ ಭತ್ತದ ಸಸಿಗಳನ್ನು ತುಳಿದು ಹಾಕಿದೆ.

ಕಳಸಾಪುರ, ಜಾರ್ಗಲ್, ಅಂದಗಾರು ಭಾಗದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಕ್ರಮೇಣ ಪಟ್ಟಣಕ್ಕೆ ಹತ್ತಿರದಲ್ಲಿ ಎನ್.ಕೆ.ರಸ್ತೆ ಬಳಿ ಬಂದು ಕುಂಚೂರು ಘಾಟಿ ಇಳಿದು ತೋಟ-ಗದ್ದೆಯಲ್ಲಿ ಓಡಾಡಿ ಬೆಳೆ ಹಾನಿ ಮಾಡಿತ್ತು. ಗುಡ್ಡ ಪ್ರದೇಶ ಹತ್ತಲಾಗದೆ ಹಾದಿ ಬದಲಾಯಿಸಿ ಮತ್ತೆ ಘಾಟಿ ಪ್ರದೇಶ ಏರಿ, ಶನಿವಾರ ಬೆಳಿಗ್ಗೆ ಮರಿತೊಟ್ಟಿಲು ಭಾಗಕ್ಕೆ ಬಂದು ಅಲ್ಲಿಂದ ವಾಪಸ್ ಹೆಜ್ಜೆ ಹಾಕಿದೆ ಎನ್ನಲಾಗಿದೆ.
ಇನ್ನು ಕಾಡಾನೆ ತುಳಿತಕ್ಕೆ ಭಾನುವಾರ ಮತ್ತೋರ್ವ ರೈತ ಬಲಿಯಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಹುಯಿಗೆರೆ ಗ್ರಾಪಂ ಅಂಡವಾನೆ ಗ್ರಾಮದ ಸುಬ್ಬೇಗೌಡ ಎನ್ನುವವರನ್ನು ಆನೆ ದಾಳಿ ಮಾಡಿ ತುಳಿದು ಸಾಯಿಸಿದೆ ಎನ್ನಲಾಗಿದೆ.
ಹಾಗೆ ಕಳೆದ ಬುಧವಾರ ರಾತ್ರಿಯಷ್ಟೇ ಬನ್ನೂರು ಗ್ರಾಮದಲ್ಲಿ ಕಾಡಾನೆ ಅನಿತಾ ಎಂಬ ಕೂಲಿ ಕಾರ್ಮಿಕ ಮಹಿಳೆಯನ್ನು ಸಾಯಿಸಿತ್ತು. ಮಹಿಳೆ ಮೃತಪಟ್ಟ ಬಳಿಕ ಬಾಳೆಹೊನ್ನೂರು ಅರಣ್ಯ ಇಲಾಖೆ ಮುಂಭಾಗದಲ್ಲಿ ಸಾವಿರಾರು ರೈತರು, ಸಾರ್ವಜನಿಕರು ಬೃಹತ್ ಪ್ರತಿ ಭಟನೆ ನಡೆಸಿ ಕಾಡಾನೆಯನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಐದು ದಿನಗಳ ಅಂತರದಲ್ಲಿ ಕಾಡಾನೆ ತುಳಿತಕ್ಕೆ ಮತ್ತೋರ್ವ ಬಲಿಯಾಗಿರುವುದಕ್ಕೆ ಗ್ರಾಮಸ್ಥರು, ರೈತರು ತೀವ್ರ ಆಕ್ರೋಶಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿ ತಡೆದು ಸರ್ವ ಪಕ್ಷಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು ಅರಣ್ಯ ಸಚಿವರು, ಶಾಸಕರ ವಿರುದ್ಧ ಸುಧಾಕರ್ ಶೆಟ್ಟಿ ಕಿಡಿ ಕಾರಿದ್ದಾರೆ.4 ದಿನದ ಅಂತರದಲ್ಲಿ ಇಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ರೂ ಶಾಸಕರು, ಸಚಿವರು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.