ಸಕಲೇಶಪುರ: ಅಡುಗೆ ವಿಚಾರಕ್ಕೆ ಅಣ್ಣ- ತಮ್ಮನ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯ ಆಗಿರುವ ಘಟನೆ ಸಕಲೇಶಪುರದ ಹಾರ್ಲೆ ಕೂಡಿಗೆ ಗ್ರಾಮದಲ್ಲಿ ನಡೆದಿದೆ.

ಅಡುಗೆ ವಿಚಾರಕ್ಕೆ ಕಿರಿಕ್ ತೆಗೆದ ಅಣ್ಣ ಸುನಿಲ್ ಮಂಥೆರೋ ತಮ್ಮ ಜೊಸೆಫ್ ಮಂಥೆರೋ(36)ನನ್ನು ಹತ್ಯೆ ಮಾಡಿದ್ದಾನೆ. ಗುರುವಾರ ರಾತ್ರಿ ಅಡುಗೆ ಮಾಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಮಾತಿಗೆ ಮಾತು ಬೆಳೆದು ಅಣ್ಣ ದೊಣ್ಣೆಯಿಂದ ಬಲವಾಗಿ ತಮ್ಮನ ತಲೆಗೆ ಹೊಡೆದ ಪರಿಣಾಮ ಜೊಸೆಫ್ ಮಂಥೆರೋ ಸ್ಥಳದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.
ತಾಯಿ ಪಿಲೋಮೀನ್ ಮಂಥೆರೋ ಬೆಳಗ್ಗೆ ಎದ್ದು ನೋಡಿದಾಗ ಜೊಸೆಫ್ ಮಂಥೆರೋ ಮೃತ ಪಟ್ಟಿರುವುದು ತಿಳಿದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಸುನಿಲ್ ಮಂಥೆರೋನ್ನ ವಶಕ್ಕೆ ಪಡೆದಿದ್ದಾರೆ.
ತಾಯಿ ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸುನಿಲ್ ಮಂಥೆರೋನನ್ನ ಪೊಲೀಸರು ಬಂಧಿಸಿದ್ದಾರೆ.