ಹಾಸನ: ಕಾಡುಕೋಣವೊಂದು ದಾಳಿ ನಡೆಸಿದ ಹಿನ್ನೆಲೆ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ಟೌನ್ನಲ್ಲಿ ನಡೆದಿದೆ. ಶಾಂತಮ್ಮ (54) ಗಂಭೀರವಾಗಿ ಗಾಯಗೊಂಡ ಮಹಿಳೆಯಾಗಿದ್ದು, ಇಂದು ಬೆಳಗ್ಗೆ 8 ಗಂಟೆಯ ಸಮಯದಲ್ಲಿ ಚನ್ನರಾಯಪಟ್ಟಣದ ವಿದ್ಯಾನಗರದಲ್ಲಿ ಈ ಘಟನೆ ನಡೆದಿದೆ.
ಶನಿವಾರ ಮುಂಜಾನೆ ಎಂದಿನಂತೆ ಹಂದಿಜೋಗಿ ಶಾಂತಮ್ಮ ಅವರು ಹಂದಿ ಮೇಯಿಸಲು ಬಂದಿದ್ದರು. ಇದೇ ವೇಳೆ ಹಂದಿಗಳಿರುವ ಜಾಗಕ್ಕೆ ಕಾಡುಕೋಣವೊಂದು ಬಂದಿದೆ. ಆದರೆ, ಶಾಂತಮ್ಮ ಅದನ್ನು ಎಮ್ಮೆ ಎಂದು ತಿಳಿದು ಓಡಿಸಲು ಮುಂದಾದಾಗ ಆಕೆಯ ಮೇಲೆ ದಾಳಿ ನಡೆಸಿದೆ. ಇದರಿಂದಾಗಿ ಅವರ ಎಡಗೈ ಮುರಿದಿದೆ. ಅಲ್ಲದೇ, ಜೋರಾಗಿ ನೆಲಕ್ಕೆ ಬಿದ್ದ ಪರಿಣಾಮ ಹೊಟ್ಟೆ ಹಾಗೂ ಕೈ ಕಾಲಿಗೆ ಗಾಯವಾಗಿದೆ. ಹೀಗಾಗಿ, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾಸ್ಪತ್ರೆ (ಹಿಮ್ಸ್)ಗೆ ದಾಖಲು ಮಾಡಲಾಗಿದೆ.
ಚನ್ನರಾಯಪಟ್ಟಣ ಬಯಲು ಸೀಮೆ ಪ್ರದೇಶ. ಇಲ್ಲಿ ಸಾಮಾನ್ಯವಾಗಿ ಕಾಡುಪ್ರಾಣಿಗಳು ಬರುವುದಿಲ್ಲ. ಹಿಂದೆ ಶ್ರವಣಬೆಳಗೊಳ, ಉದಯಪುರ, ಬಾಗೂರು, ನುಗ್ಗೇಹಳ್ಳಿ ಭಾಗದಲ್ಲಿ ಚಿರತೆಗಳು ಕಾಣಿಸಿದ್ದವು. ಆದರೆ, ಇದೇ ಮೊದಲ ಬಾರಿಗೆ ಕಾಡುಕೋಣ ಬಂದಿರುವುದನ್ನು ನೋಡಿದರೆ ಬಹುಶಃ ಸಕಲೇಶಪುರ ಅಥವಾ ಚಿಕ್ಕಮಗಳೂರು ಭಾಗದಿಂದ ತನ್ನ ಗುಂಪಿನಿಂದ ತಪ್ಪಿಸಿಕೊಂಡು ಬಂದಿರಬಹುದು. ಸದ್ಯ ಓರ್ವ ಮಹಿಳೆ, 3 ಬೈಕ್ ಮತ್ತು ಒಂದು ಕಾರಿನ ಮೇಲೆ ಕಾಡುಕೋಣ ದಾಳಿ ನಡೆಸಿದ್ದು, ವಾಹನಗಳನ್ನು ಜಖಂಗೊಳಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.
