ಚಿಕ್ಕಮಗಳೂರು: ಸಂತೆಯಲ್ಲಿ ಕರಪತ್ರ ಹಂಚಿ ಮತಾಂತರಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ ಇಬ್ಬರಿಗೆ ಸ್ಥಳೀಯರು ಥಳಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ಸೋಮವಾರ ನಡೆದಿದೆ. ಈ ಸಂಬಂಧ ಎರಡೂ ಕಡೆಯವರಿಂದ ದೂರು, ಪ್ರತಿದೂರು ನೀಡಲಾಗಿದ್ದು, ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಹೊಸಪೇಟೆ ಗ್ರಾಮದಲ್ಲಿ ಇಂದು ವಾರದ ಸಂತೆ ನಡೆಯುತ್ತಿತ್ತು. ಅಲ್ಲಿಗೆ ಓಮಿನಿಯಲ್ಲಿ ಬಂದಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಮೂಲದ ಇಬ್ಬರು ಕೆಲ ಬರಹಗಳಿರುವ ಕರಪತ್ರ ಕೊಟ್ಟು ಮತಾಂತರಕ್ಕೆ ಪ್ರೇರೇಪಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

ವಿಷಯ ತಿಳಿದ ಸ್ಥಳೀಯರು ಹಾಗೂ ಕೆಲ ಸಂಘಟನೆ ಕಾರ್ಯಕರ್ತರು ಓರ್ವ ಯುವಕ ಹಾಗೂ ಮತ್ತೋರ್ವ ಮಧ್ಯ ವಯಸ್ಕನನ್ನು ಹಿಡಿದು ಪ್ರಶ್ನಿಸಿದ್ದಾರೆ. ಆಗ ಮಾತಿನ ಚಕಮಕಿ ನಡೆದು ಇಬ್ಬರೂ ತಾವು ಬಂದಿದ್ದ ಓಮಿನಿಯಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಸಂಘಟನೆ ಕಾರ್ಯಕರ್ತರು ಬೈಕಿನಲ್ಲಿ ಅಷ್ಟೇ ವೇಗವಾಗಿ ಚೇಸ್ ಮಾಡಿ ಹೊಸಪೇಟೆ ಗ್ರಾಮದಿಂದ ಸುಮಾರು 10 ಕಿಲೋ ಮೀಟರ್ ದೂರದ ಕೈಮರ ಚೆಕ್ ಪೋಸ್ಟ್ನಲ್ಲಿ ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಓಮಿನಿಯಲ್ಲಿ ಬಂದಿದ್ದ ಇಬ್ಬರು ‘ನಿಮ್ಮ ದುಃಖ ಸಂತೋಷವಾಗಿ ಬದಲಾಗುತ್ತೆ’ ಎಂಬ ಮುಖಪುಟದ ಪುಸ್ತಕವನ್ನು ಹಿಡಿದು ಬಂದಿದ್ದರು. ಭದ್ರಾವತಿಯಿಂದ ಹೊಸಪೇಟೆ ಗ್ರಾಮಕ್ಕೆ ಬರುವ ಮಾರ್ಗ ಮಧ್ಯದ ಹಳ್ಳಿಗಳಲ್ಲೂ ಮತಾಂತರಕ್ಕೆ ಪ್ರೇರೇಪಿಸಿರುವ ಸಾಧ್ಯತೆ ಇದೆ ಎಂದು ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದಾರೆ.

