ಚಿಕ್ಕಮಗಳೂರು : ಭೀಕರ ಬೈಕ್ ಅಪಘಾತದಲ್ಲಿ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಹೊರವಲಯದ ಎಐಟಿ ವೃತ್ತದಲ್ಲಿ ನಡೆದಿದೆ.
ತಾಲೂಕಿನ ಹಲಸುಬಾಳು ಗ್ರಾಮದ 22 ವರ್ಷದ ದೀಪಕ್ ಮೃತಪಟ್ಟ ದುರ್ದೈವಿ, ಅತಿ ವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ.
ಪರಿಣಾಮ ದೀಪಕ್ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ನಗರ ಸಂಚಾರಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಧನಂಜಯ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಆಂಬುಲೆನ್ಸ್ ಚಾಲಕರ ನೆರವಿನೊಂದಿಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಸದ್ಯ ಈ ಅಪಘಾತಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.
