ಚಿಕ್ಕಮಗಳೂರು: ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಬಜೆಟ್ ನಲ್ಲಿ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿಯಿಂದ ಕೈಮರವರೆಗೂ ಕೇಬಲ್ ಕಾರ್ ರೋಪ್ ವೇ ಯೋಜನೆ ಮಾಡಲು ಘೋಷಿಸುವುದು ಖಂಡನೀಯ ಕೂಡಲೇ ಇದನ್ನು ಹಿಂಪಡೆಯಬೇಕೆಂದು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ.ವೀರೇಶ್ ಆಗ್ರಹಿಸಿದ್ದಾರೆ.
ಹೌದು .. ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿಯಿಂದ ಕೈಮರವರೆಗೂ ಕೇಬಲ್ ಕಾರ್ ರೋಪ್ ವೇ ಯೋಜನೆ ಮಾಡಲು ಈ ಹಿಂದಿನ ಬಿಜೆಪಿ ಸರ್ಕಾರದ ಬಜೆಟ್ ನಲ್ಲಿ ಘೋಷಿಸಲಾಯಿತು. ಪರಿಸರ ಪ್ರಿಯರ ವಿರೋಧಕ್ಕೆ ಮಣಿದ ಸರ್ಕಾರ ಅದನ್ನು ಕೈಬಿಟ್ಟಿತು, ಮತ್ತೆ ಈ ಅವೈಜ್ಞಾನಿಕ ಯೋಜನೆಯನ್ನು ಬಜೆಟ್ ನಲ್ಲಿ ಘೋಷಣೆ ಮಾಡಿರುವುದು ಎಷ್ಟು ಸರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು.
ಮುಳ್ಳಯ್ಯನಗಿರಿ ರಾಜ್ಯದ ಅತಿ ಎತ್ತರದ ಪ್ರದೇಶ ಶೋಲಾ ಕಾಡು ಹುಲ್ಲುಗಾವಲು ಸೇರಿದಂತೆ ಹುಲಿ ಆವಾಸಸ್ಥಾನ ಇಲ್ಲಿದೆ.ಈ ಯೋಜನೆಯಿಂದ ಇಲ್ಲಿನ ವನ್ಯಜೀವಿ ಮತ್ತು ಕಾಡಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಮುಳ್ಳಯ್ಯನಗಿರಿ ಯಲ್ಲಿ ಹುಟ್ಟುವ ಯಗಚಿ, ವೇದ ನದಿ ಸೇರಿದಂತೆ ಹಲವು ನೀರಿನ ಉಗಮ ಸ್ಥಾನಕ್ಕೆ ದಕ್ಕೆ ಉಂಟಾಗುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಈ ಅನುಕೂಲ ಮಾಡುವ ಹೆಸರಿನಲ್ಲಿ ಕೇಬಲ್ ಕಾರ್ ರೋಪ್ ವೇ ಯೋಜನೆ ಜಾರಿಗೆ ತರುತ್ತಿರುವುದು ತೀವ್ರ ಖಂಡನೀಯ ಎಂದರು.
ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಮಾಡಬಾರದು, ಈ ಸಂಭಂದ ಹೋರಾಟ ಮತ್ತು ಕಾನೂನು ಹೋರಾಟ ಮಾಡಲಾಗುತ್ತದೆ. ಸ್ಥಳೀಯರಿಗೆ ಇಷ್ಟವಿಲ್ಲದ ಮತ್ತು ಇಲ್ಲಿನ ಪರಿಸರ ಹಾಳುಮಾಡುವ ಯೋಜನೆ ಬೇಡ ,ಕೂಡಲೇ ಸರ್ಕಾರ ಇದನ್ನು ಹಿಂಪಡೆಯಬೇಕು ಎಂದು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ವೀರೇಶ್ ಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
