ಚಿಕ್ಕಮಗಳೂರು: ಕಾಫಿನಾಡ ಚಿಕ್ಕಮಗಳೂರು ನಗರದಲ್ಲಿ ಅಮಾನವೀಯ ಘಟನೆ ನಡೆದಿದ್ದು, ಹೌದು ನಗರದ ದತ್ತು ಸಂಸ್ಥೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಒಂದು ವರ್ಷ ಮೂರು ತಿಂಗಳ ಹೆಣ್ಣುಮಗು ಸುಟ್ಟ ಗಾಯದಿಂದ ನರಳುವಂತಾಗಿದ್ದು, ಪ್ರಕರಣ ಸಂಬಂಧ ದತ್ತು ಸಂಸ್ಥೆಯ ಆಯಾ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಮಾನತ್ತುಗೊಳಿಸಲು ನೋಟಿಸ್ ಕೂಡ ನೀಡಲಾಗಿದೆ.

ದತ್ತು ಸಂಸ್ಥೆಯಲ್ಲಿ ಮಗುವನ್ನು ಸ್ನಾನ ಮಾಡಿಸಲು ಸ್ನಾನಗೃಹಕ್ಕೆ ಕರೆದೊಯ್ದು ಗೀಸರ್‌ನಿಂದ ಬಕೆಟ್‌ಗೆ ಬಿಸಿನೀರು ಬಿಟ್ಟು ಮಗು ಶೌಚ ಮಾಡಿದ್ದನ್ನು ಸ್ವಚ್ಛಗೊಳಿಸಲು ಸಂಸ್ಥೆಯ ಆಯಾ ಹೊರಗೆ ತೆರಳಿದ್ದರು. ಕುದಿಯುವ ಬಿಸಿನೀರು ಬಕೆಟ್ ತುಂಬಿ ಸ್ನಾನಗೃಹದಲ್ಲಿ ಹರಿದಿದ್ದು, ಸ್ನಾನಗೃಹದ ನೆಲಹಾಸು ಮೇಲೆ ಕುಳಿತ್ತಿದ್ದ ಮಗುವಿನ ಸುತ್ತ ಬಿಸಿನೀರು ಹರಿದಿದೆ. ಇದರಿಂದ ಮಗುವಿನ ಸೊಂಟದ ಕೆಳಭಾಗದಲ್ಲಿ ಸುಟ್ಟು ಹೋಗಿದೆ. ಸಿಬ್ಬಂದಿಯ ಬೇಜವಾಬ್ದಾರಿಯಿಂದ ಮಗು ನರಳುವಂತಾಗಿದೆ.
ಸರ್ಕಾರಿ ವಿಶೇಷ ದತ್ತು ಸಂಸ್ಥೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಡಿಯಲ್ಲಿ ದತ್ತು ಸಂಸ್ಥೆಯಲ್ಲಿ ಅನಾಥ ಮಕ್ಕಳನ್ನು ರಕ್ಷಿಸಿ ಆರೈಕೆ ಮಾಡಲಾಗುತ್ತದೆ. ಜು.9 ರಂದು ಘಟನೆ ನಡೆದಿದ್ದರು ಮೇಲಾಧಿಕಾರಿಗಳಿಗೆ ತಿಳಿಯದಂತೆ ಸಿಬ್ಬಂದಿ ಮುಚ್ಚಿಟ್ಟಿದ್ದರು. ಮಗು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದತ್ತು ಸಂಸ್ಥೆಯಲ್ಲಿ ಆಯಾ ಕೆಲಸ ನಿರ್ವಹಿಸುವ ಲತಾ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದತ್ತು ಸಂಸ್ಥೆಯ ಸಿಬ್ಬಂದಿಗೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ನೋಟಿಸ್ ನೀಡಿದ್ದಾರೆ.