ಚಿಕ್ಕಮಗಳೂರು-ಭಾರತ ಕಮ್ಯುನಿಷ್ಟ್ ಪಕ್ಷದ ಶತಮಾನೋತ್ಸವ ಸಂದರ್ಭದಲ್ಲಿ ಸಂಭ್ರಮದ ಜೊತೆಗೆ ಸವಾಲಿದೆ ಎಂದು ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದ್ರೇಶ್ ತಿಳಿಸಿದರು.
ನಗರದ ಅಜಾದ್ ಪಾರ್ಕ್ನಲ್ಲಿ ಸಿಪಿಐ ಜಿಲ್ಲಾ ಮಂಡಳಿ ಏರ್ಪಡಿಸಿದ್ದ ಸಮತಾ ರಾಜ್ಯದ ಕನಸುಗಳೊಂದಿಗೆ ಶ್ರಮಶಕ್ತಿಯ ಸಂಘರ್ಷದ ಶತಮಾನದ ಪಯಣ ಶತಮಾನೋತ್ಸವದ ಜಾಥಾ ಹಾಗೂ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿಯ ಸರ್ವಾಧಿಕಾರಿ ಧೋರಣೆ ಎದುರಿಸಲು ಸಮಾನ ಮನಸ್ಕ ನಾಯಕರು ಕೈಜೋಡಿಸಬೇಕೆಂದು ಮನವಿ ಮಾಡಿ ದೇಶದಲ್ಲಿ ಕೋಮುವಾದಿ ಪ್ಯಾಸಿಸ್ಟ್ ನೀತಿಯಿಂದ ಬಂಡವಾಳ ಶಾಹಿಗಳಿಗೆ ಹಾಗೂ ಕಾರ್ಪೋರೇಟ್ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಇದರಿಂದಾಗಿ ದಲಿತರು, ಆದಿವಾಸಿಗಳು, ರೈತರು, ಯುವಜನರು, ಮಹಿಳೆಯರು ಸ್ವಾತಂತ್ರ್ಯ ಕಳೆದುಕೊಳ್ಳುತ್ತಿದ್ದಾರೆಂದು ಹೇಳಿದರು.
ಈ ನಿಟ್ಟಿನಲ್ಲಿ ಸಿಪಿಐ ಪಕ್ಷ ಮತ್ತೊಮ್ಮೆ ಸ್ವಾತಂತ್ರ್ಯ ಸಂಗ್ರಾಮ ಮಾಡುವ ಸಲುವಾಗಿ ದೇಶಪ್ರೇಮಿಗಳು, ಜಾತ್ಯಾತೀತ ಪ್ರಗತಿಪರ ಸಂಘಟನೆಗಳು, ವಿವಿಧ ಪಕ್ಷಗಳು, ಪ್ರಸ್ತುತ ಇರುವ ಸವಾಲುಗಳನ್ನು ಎದುರಿಸಲು ಒಗ್ಗೂಡಬೇಕಾದ ಅನಿವಾರ್ಯತೆ ಇದೆ ಎಂದು ಮನವಿ ಮಾಡಿದರು.
ಸಮತಾ ಸಮಾಜ ನಿರ್ಮಾಣವಾಗಬೇಕಾದರೆ ದಲಿತರಿಗೆ, ಆದಿವಾಸಿಗಳಿಗೆ ಸಮಾನವಾಗಿ ಭೂಮಿ ಹಂಚಿಕೆಯಾಗಬೇಕು, ನರೇಂದ್ರ ಮೋದಿಯವರ ಕೇಂದ್ರಸರ್ಕಾರದ ಆಡಳಿತದಲ್ಲಿ ಶೇ.೬೦ ರಷ್ಟು ಆಸ್ತಿ ಶೇ.೧ ರಷ್ಟು ಇರುವ ಶ್ರೀಮಂತರ ಕೈಯಲ್ಲಿ ಇರುವುದು ದುರಂತ ಎಂದು ತಿಳಿಸಿದರು.
ಆರ್‌ಎಸ್‌ಎಸ್ ಬಿಜೆಪಿಯನ್ನು ಅಧಿಕಾರದಲ್ಲಿ ಮುಂದುವರೆಯಲು ಬಿಡದೆ ಸಿಪಿಐ ಸಮತಾ ಸಮಾಜ ನಿರ್ಮಾಣಕ್ಕಾಗಿ ಹೋರಾಟ ರೂಪಿಸಲಿದೆ. ಜಾತ್ಯಾತೀತ, ಪ್ರಜಾಪ್ರಭುತ್ವವಾದಿ ಎಡಪಕ್ಷಗಳು ಈ ಸಂದರ್ಭದಲ್ಲಿ ಗಂಭೀರವಾದ ಹೋರಾಟಕ್ಕೆ ಪ್ರತಿಜ್ಞೆ ಮಾಡಬೇಕೆಂದು ವಿನಂತಿಸಿದರು.
ಜಿಲ್ಲೆಯಲ್ಲಿ ಭೂಮಿ ಹೋರಾಟ ಮುಂದುವರೆಯಲಿದೆ, ರಾಜ್ಯದಲ್ಲಿ ಸಮತಾ ಕನಸು ನನಸಾಗಬೇಕಾದರೆ ರೋಟಿ, ಕಪಡ, ಮಖಾನ ಈ ಮೂರೂ ಇರಬೇಕು. ರಾಜ್ಯದಲ್ಲಿ ೨೭ ಲಕ್ಷ ಕುಟುಂಬಗಳಿಗೆ ಸ್ವಂತ ಮನೆಯಿಲ್ಲ, ಜಿಲ್ಲೆಯಲ್ಲಿ ಸೂರಿಲ್ಲದವರಿಗೆ ಮನೆ ಕೊಡಿಸುವುದೇ ಸಿಪಿಐ ಶತಮಾನದ ಸಂಭ್ರಮದ ಪ್ರತಿಜ್ಞೆ ಎಂದರು.
ಸಿಪಿಐ ರಾಜ್ಯ ಸಹಕಾರ್ಯದರ್ಶಿ ಪಿ.ವಿ ಲೋಕೇಶ್ ಮಾತನಾಡಿ, ಈ ದೇಶದಲ್ಲಿ ನದಿ ನೀರು ಹರಿದಿದೆ, ಗಾಳಿಯಲ್ಲಿ ಬದಲಾವಣೆ, ಭೂಮಿಯಲ್ಲಿ ಸಾಕಷ್ಟು ಸ್ಥಿತ್ಯಂತ್ರ ಆಗಿದೆ. ರಾಜಕಾರಣದಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿರುವುದನ್ನು ಕಾಣುತ್ತಿದ್ದೇವೆ ಎಂದರು.
ಈ ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡಿರುವ ಈಗಿನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸುವವರೆಲ್ಲ ಒಂದೆಡೆ ನಿಲ್ಲಬೇಕಾಗಿದೆ ಎಂದು ಮನವಿ ಮಾಡಿದರು.
ಸಮಾಜದಲ್ಲಿ ಬಿಡಿ ಬಿಡಿ ಹೋರಾಟದಿಂದ ಶತೃವಿನ ಗೆಲುವು ಸುಗಮವಾಗುತ್ತಿದೆ ಎಂಬುದನ್ನು ಮನಗಾಣಬೇಕಿದೆ. ಪರೋಕ್ಷವಾಗಿ ಬ್ರಿಟೀಷ್ ನೀತಿಯಿಂದ ಈ ದೇಶದ ಸಂಪತ್ತನ್ನು ಲೂಟಿ ಹೊಡೆಯಲಾಗುತ್ತಿದೆ ಎಂದು ಆರೋಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ರಘು ವಹಿಸಿದ್ದರು. ಮುಖಂಡ ವಿಜಯ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಜಿಲ್ಲಾ ಕಾರ್ಯದರ್ಶಿ ಹೆಚ್.ಎಂ ರೇಣುಕಾರಾಧ್ಯ, ರಾಧಾಸುಂದರೇಶ್, ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರಾದ ರವೀಶ್‌ಬಸಪ್ಪ, ಮಹೇಶ್, ಅಣ್ಣಯ್ಯ ರಾಜ್ಯ ಸಹಕಾರ್ಯದರ್ಶಿ ಸಂತೋಷ್, ಹೆಚ್.ಕೆ.ಸೋಮೇಗೌಡ, ವಸಂತ್‌ಕುಮಾರ್, ಧರ್ಮರಾಜ್, ರಮೇಶ್,ಮೊದಲಿಗೆ ಕೆರಮಕ್ಕಿ ಮಹೇಶ್ ಸ್ವಾಗತಿಸಿದರು.
