ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್, ಬಜರಂಗದಳ, ಶ್ರೀರಾಮ ಸೇನೆ ವತಿಯಿಂದ ಮೂರು ದಿನ ನಡೆಯಲಿರುವ ದತ್ತ ಜಯಂತಿಯಲ್ಲಿ ಶಾಂತಿ–ಸೌಹಾರ್ದ ಕಾಪಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಡಿ.2 ಇಂದು ಅನುಸೂಯ ಜಯಂತಿ, 3ರಂದು ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ, 4ರಂದು ಶ್ರೀಗುರು ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಮಾಲಾಧಾರಿಗಳು ದತ್ತ ಪಾದುಕೆ ದರ್ಶನ ಮಾಡಲಿದ್ದಾರೆ.
ನಗರದಲ್ಲಿ ಎಲ್ಲೆಡೆ ಕೇಸರಿ ಬಂಟಿಂಗ್ಸ್ಗಳು ಹಾರಾಡುತ್ತಿವೆ. ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಎಲ್ಲೆಡೆ ಪೊಲೀಸರನ್ನೂ ನಿಯೋಜಿಸಲಾಗಿದ್ದು, ಇಡೀ ನಗರದಲ್ಲಿ ಸೋಮವಾರ ಎಲ್ಲೆಲ್ಲೂ ಪೊಲೀಸರೇ ಕಂಡು ಬಂದರು. ಎಲ್ಲೆಡೆ ಬ್ಯಾರಿಕೇಡ್ಗಳನ್ನೂ ಅಳವಡಿಸಲಾಗಿದೆ.
ಮುಳ್ಳಯ್ಯನಗಿರಿ ಮತ್ತು ಸುತ್ತಮುತ್ತಲ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಬೇರೆ ಪ್ರವಾಸಿಗರು ದಿನಾಂಕ ಮುಂದೂಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಡಿ.5ರ ಬೆಳಿಗ್ಗೆ 10 ಗಂಟೆ ತನಕ ಪ್ರವಾಸಿಗರಿಗೆ ನಿಷೇಧವಿದೆ. ಸ್ಥಳೀಯರು ಮತ್ತು ಹೋಮ್ಸ್ಟೇಗಳನ್ನು ಕಾಯ್ದಿರಿಸಿರುವ ಪ್ರವಾಸಿಗರಿಗೆ ಮಾತ್ರ ಅವಕಾಶ ಕಲ್ಪಿಸಿದ್ದಾರೆ.
ಶೋಭಾಯಾತ್ರೆ, ಪಾದುಕೆ ದರ್ಶನದ ದಿನ ಹಲವು ರಸ್ತೆಗಳಲ್ಲಿ ಸಂಚಾರ ಬಂದ್ ಆಗಲಿದ್ದು, ಪ್ರವಾಸಿಗರು ದಟ್ಟಣೆಯಲ್ಲಿ ಸಿಲುಕಿ ತೊಂದರೆ ಅನುಭವಿಸುವುದು ಬೇಡ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ದತ್ತ ಜಯಂತಿ ಸಂದರ್ಭದಲ್ಲಿ ಶಾಂತಿ–ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಲು 5 ಸಾವಿರ ಪೊಲೀಸರುನ್ನು ನಿಯೋಜನೆ ಮಾಡಲಾಗಿದೆ.
ರಾಮನಹಳ್ಳಿಯ ಡಿಎಆರ್ ಆಟದ ಮೈದಾನದಲ್ಲಿ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಲಾಯಿತು. ಸಂಜೆ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ವಿಕ್ರಮ ಅಮಟೆ ನೇತೃತ್ವದಲ್ಲಿ ಸಿಬ್ಬಂದಿ ನಗರದಲ್ಲಿ ಕವಾಯತು ನಡೆಸಿದರು.
ಕ್ವಿಕ್ ಆಕ್ಷನ್ ಪೋರ್ಸ್, ಸ್ಪೆಷಲ್ ಆಕ್ಷನ್ ಪೋರ್ಸ್, ರ್ಯಾಪಿಡ್ ಆಕ್ಷನ್ ಪೋರ್ಸ್ ತಂಡಗಳು ಕಾರ್ಯನಿರ್ವಹಿಸಲಿವೆ. ನಗರ ಸೇರಿ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಸಾಗುವ ಮಾರ್ಗ ಮತ್ತು ಗಿರಿಯಲ್ಲಿ ಪ್ರತ್ಯೇಕ ತಂಡಗಳು ಕಾರ್ಯನಿರ್ವಹಿಸಲಿವೆ ಎಂದು ವಿಕ್ರಮ ಅಮಟೆ ತಿಳಿಸಿದರು.
ಶೋಭಾಯಾತ್ರೆ ಸಾಗುವ ಮಾರ್ಗದದಲ್ಲಿ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 15 ಡ್ರೋನ್ ಬಳಕೆ ಮಾಡಲಾಗುತ್ತಿದೆ. ಗಡಿಗಳಲ್ಲಿ 28 ಚೆಕ್ಪೋಸ್ಟ್ ತೆರೆಯಲಾಗಿದೆ ಎಂದು ವಿವರಿಸಿದರು.
ಗಿರಿಭಾಗದಲ್ಲಿ ಚಳಿ ವಾತಾವರಣ ಇರುವುದರಿಂದ 45 ವರ್ಷದೊಳಗಿನ ಸಿಬ್ಬಂದಿಯನ್ನೇ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.
