ಚಿಕ್ಕಮಗಳೂರು: ರಾಜ್ಯಸರ್ಕಾರ ತೋಟಗಾರಿಕೆ, ಕೃಷಿ ಮತ್ತು ಕಾಫಿಮಂಡಳಿ ಅಧಿಕಾರಿಗಳನ್ನೊಳಗೊಂಡ ಜಂಟಿ ಸಮೀಕ್ಷೆ ನಡೆಸಿ ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ ಬೆಳೆ ನಷ್ಟವನ್ನು ಅಂದಾಜಿಸಿ ಬೆಳೆಗಾರರಿಗೆ ರಾಷ್ಟ್ರೀಯ ವಿಪತ್ತು ನಿಧಿ ಮತ್ತು ರಾಜ್ಯ ವಿಪತ್ತು ನಿಧಿಯಿಂದ ಪರಿಹಾರ ನೀಡಲು ಸೂಚಿಸಬೇಕೆಂದು ಜಿಲ್ಲಾ ಬೆಳೆಗಾರರ ಸಂಘ ಒತ್ತಾಯಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ಜಿಲ್ಲಾಧ್ಯಕ್ಷ ಕೆ.ಯು. ರತೀಶ್ ಕುಮಾರ್ ಬೆಳೆ ನಷ್ಟವಾಗಿರುವ ತೋಟಗಳಿಗೆ ಅಧಿಕಾರಿಗಳನ್ನು ಕರೆದೊಯ್ಯಲು ಸಿದ್ದವಿದ್ದು, ಇನ್ನೂ ಎರಡು ತಿಂಗಳು ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ ಎಂದು ಹೇಳಿದರು.
ಕಳೆದ ನಾಲ್ಕೈದು ವರ್ಷಗಳಿಂದ ಅತಿವೃಷ್ಟಿ ಹಾನಿಯಿಂದಾಗಿ ತೊಂದರೆ ಅನುಭವಿಸುತ್ತಿದ್ದು, ಇದರ ಜೊತೆಗೆ ಗಾಯದ ಮೇಲೆ ಬರೆ ಎಳೆದಂತೆ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಬ್ಯಾಂಕ್‌ಗಳು ಸರ್ಫೇಸಿ ಕಾಯ್ದೆ ಅನ್ವಯ ಆನ್ಲೈನ್ ಮೂಲಕ ಹರಾಜು ಮಾಡಲು ಮುಂದಾಗುತ್ತಿರುವ ಕ್ರಮವನ್ನು ಖಂಡಿಸಿದರು.
ಜಿಲ್ಲೆಯ ಕಾಫಿ ಬೆಳೆಗಾರರ ಪ್ರದೇಶಗಳಾದ ಮೂಡಿಗೆರೆ ತಾಲ್ಲೂಕು ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯ, ಜಾಗರ,ಆವತಿ, ವಸ್ತಾರೆ, ಆಲ್ದೂರು ಮತ್ತು ಕಸಬಾ ಹೋಬಳಿಗಳು, ಕೊಪ್ಪ, ಶೃಂಗೇರಿ, ಎನ್.ಆರ್. ಪುರ ತಾಲ್ಲೂಕುಗಳಲ್ಲಿ ಎಡಬಿಡದೆ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ಕಾಫಿ, ಕಾಳುಮೆಣಸು, ಅಡಿಕೆ ಮುಂತಾದ ಬೆಳೆಗಳು ನೆಲಕಚ್ಚಿ ನಷ್ಟ ಅನುಭವಿಸುತ್ತಿವೆ ಎಂದು ವಿವರಿಸಿದರು.
ಈಗ ಕಾಫಿಗೆ ಉತ್ತಮ ಬೆಲೆ ಬಂದಿದ್ದರೂ ಸೂರ್ಯನ ಕಿರಣಗಳಿಲ್ಲದೆ ವ್ಯಾಪಕ ಮಳೆಯಾಗಿ ಕಪ್ಪು ಕೊಳೆರೋಗ ಬಾದಿಸುತ್ತಿರುವುದರಿಂದ ಫಸಲು ನಾಶವಾಗುತ್ತಿದ್ದು, ಬೆಳೆಗಾರರನ್ನು ಸಂಕಷ್ಟಕ್ಕೀಡುಮಾಡಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ವರ್ಷ ಮಲೆನಾಡು ಭಾಗದಲ್ಲಿ ಶೇ.೯೦ ರಷ್ಟು ಕಾಳುಮೆಣಸಿನ ಫಸಲು ಇಲ್ಲವಾಗಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಬಿ.ಆರ್. ಬಾಲಕೃಷ್ಣ ಮಾತನಾಡಿ, ಕಾಡಾನೆ, ಕಾಡುಪ್ರಾಣಿಗಳು ಮತ್ತು ಮಾನವ ಸಂಘರ್ಷ ದಿನೇ ದಿನೆ ಹೆಚ್ಚಾಗುತ್ತಿರುವುದರ ಜೊತೆಗೆ ಜೀವಹಾನಿಯೂ ಸಂಭವಿಸುತ್ತಿದೆ. ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಇನ್ನಷ್ಟು ಪ್ರಾಣಹಾನಿ ಸಂಭವಿಸುವ ಮುಂಚೆ ಸೆರೆಹಿಡಿದು ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.
ಕಾಫಿ ಬೆಳೆಗಾರರಿಗೆ ಪೂರಕವಾಗಿ ಕೆಲಸ ಮಾಡುವ ಕಾರ್ಮಿಕರ ರಕ್ಷಣೆಗೂ ಸಂಘ ಮುಂದಾಗಿದೆ. ಕಾಡುಕೋಣ, ಕಾಡುಹಂದಿ, ಕೋತಿಗಳ ಕಾಟದಿಂದಾಗಿ ಕಾರ್ಮಿಕರು ತೋಟದ ಕೆಲಸಕ್ಕೆ ಬರಲು ಭಯಭೀತರಾಗಿ ಇಂಜರಿಯುತ್ತಿದ್ದಾರೆ. ಸರ್ಕಾರ ನಿರ್ಲಕ್ಷ ವಹಿಸದೆ ಆನೆ ಕಾರಿಡಾರ್ ಸ್ಥಾಪನೆ ಸೇರಿದಂತೆ ಕಾಡುಪ್ರಾಣಿಗಳ ತೊಂದರೆಗೆ ಶಾಶ್ವತ ಪರಿಹಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.