ಚಿಕ್ಕಮಗಳೂರು: ಮಳೆಗಾಲ ಮುಗಿದ ಬಳಿಕ ನಗರದ ಎಲ್ಲಾ ರಸ್ತೆಗಳನ್ನು ಸುಮಾರು 12.5 ಕೋಟಿ ರೂ ವೆಚ್ಚದಲ್ಲಿ ಡಾಂಬರೀಕರಣಗೊಳಿಸಲು ಕ್ರಮ ವಹಿಸುವುದಾಗಿ ಶಾಸಕ ಹೆಚ್.ಡಿ.ತಮ್ಮಯ್ಯ ಭರವಸೆ ನೀಡಿದರು.
ಅವರು 15ನೇ ಹಣಕಾಸು ಯೋಜನೆಯಡಿ 95 ಲಕ್ಷ ರೂ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಲ್ಲಿ ರಾಂಪುರದಿಂದ ಕತ್ರಿಮಾರಮ್ಮ ದೇವಸ್ಥಾನದವರೆಗೆ ಅಳವಡಿಸಲಾಗಿರುವ ವಿದ್ಯುತ್ ದೀಪಗಳಿಗೆ ಚಾಲನೆ ನೀಡಿ ಮಾತನಾಡಿದರು.

ಅತೀ ಹೆಚ್ಚು ಮಳೆಯಿಂದ ನಗರದಲ್ಲಿ ರಸ್ತೆಗಳು ಹಾನಿಯಾಗಿದ್ದು, ನಗರಸಭೆ ಇಂಜಿನಿಯರ್‌ಗಳು ರಸ್ತೆ ದುರಸ್ಥಿಗೆ ಬೇಕಾದ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸಿ ಕಾರ್ಯಾದೇಶ ನೀಡಿದ್ದು, ಈ ಹಿನ್ನೆಲೆಯಲ್ಲಿ ಮಳೆಗಾಲ ಮುಗಿದ ಬಳಿಕ ರಸ್ತೆಗಳನ್ನು ಡಾಂಬರೀಕರಣಗೊಳಿಸಿ ಅಭಿವೃದ್ಧಿಗೊಳಿಸಲಾಗುವುದೆಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಶೇಷ ಅನುದಾನ ಘೋಷಣೆ ಮಾಡಿದ್ದು, ಜು.30, 31 ರಂದು ಭೇಟಿಮಾಡಿ ಬಹುಪಾಲು ಅನುದಾನವನ್ನು ಪಡೆದು ನಗರದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಬದ್ಧವಾಗಿರುವುದಾಗಿ ತಿಳಿಸಿದರು.
ಬಹಳ ದಿನಗಳ ನಂತರ ನಗರದ ನಾಗರೀಕರಿಗೆ ಕತ್ತಲೆಯಿಂದ ತೊಂದರೆಯಾಗಿದ್ದು, ನಗರದ ಹೆದ್ದಾರಿಯಿಂದ ಸುತ್ತಮುತ್ತಲ ವಾರ್ಡ್‌ಗಳಿಗೆ ತೆರಳುವವರಿಗೆ ಇಂದು ವಿದ್ಯುತ್ ದೀಪಗಳಿಗೆ ಚಾಲನೆ ನೀಡಿರುವುದು ಬೆಳಕಿನೆಡೆಗೆ ತರುವ ಪ್ರಯತ್ನ ಮಾಡಲಾಗಿದೆ. ಇದರಿಂದಾಗಿ ಮಹಿಳೆಯರು, ಪುರಷರು ದೈರ್ಯವಾಗಿ ಸಂಚರಿಸಬಹುದಾಗಿದೆ ಎಂದು ಹೇಳಿದರು.