ಚಿಕ್ಕಮಗಳೂರು : ಮೋಟಾರ್ ಬೈಕ್‌ನಲ್ಲಿ ತೆರಳುತ್ತಿದ್ದವರನ್ನು ದೂಡಿ ಚಿನ್ನಾಭರಣ ಕಸಿದು ಸುಲಿಗೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ಐದು ವರ್ಷಗಳ ಕಠಿಣ ಸಜೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಕಡೂರು ತಾಲ್ಲೂಕು ಬುಕ್ಕಸಾಗರ ಕೊರಚರಹಟ್ಟಿಯ ಸಂತೋಷ್ ಹಾಗೂ ಹಾಲೇಶ್ ಶಿಕ್ಷೆಗೆ ಒಳಗಾದವರು.
2012ರ ಜೂನ್ 4 ರಂದು ಕಡೂರು ತಾಲ್ಲೂಕು ಸಖರಾಯಪಟ್ಟಣ ಸಮೀಪದ ಸ್ವಾಮಿಕಟ್ಟೆ ನಿವಾಸಿ ಸುಧಾ ತಮ್ಮ ಪತಿ ಶೇಖರ್ ಅವರೊಂದಿಗೆ ಕರಡಿಗವಿ ಮಠಕ್ಕೆ ತೆರಳಿ ಮಗುವಿನೊಂದಿಗೆ ಬೈಕ್‌ನಲ್ಲಿ ಮರಳುತ್ತಿದ್ದಾಗ ಶೇಖರ್ ಅವರನ್ನು ತಳ್ಳಿ ಬೈಕ್ ಅನ್ನು ದೂಡಿ ರಸ್ತೆಯ ಮೇಲೆ ಬೀಳಿಸಿದ್ದರು.
ಆರೋಪಿ ಸಂತೋಷ್ ಮಗುವನ್ನೆತ್ತಿಕೊಂಡು ಚಾಕು ತೋರಿಸಿ ಹೆದರಿಸಿದ್ದು, ಹಾಲೇಶನು ಸುಧಾ ಅವರ ಕೊರಳಿನಲ್ಲಿದ್ದ ಬಂಗಾರದ ಮಾಂಗಲ್ಯ ಸರ, ಒಂದು ಬಂಗಾರದ ನೆಕ್ಲೇಸ್, ಮೊಬೈಲ್ ಹಾಗೂ ಬೈಕ್‌ನ ಕೀಯನ್ನು ಕಸಿದಿದ್ದರೆನ್ನಲಾಗಿದೆ.
ಈ ಬಗ್ಗೆ ಸುಧಾ ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಭಾನುಮತಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಪಾದಿತರಾದ ಸಂತೋಷ್ ಮತ್ತು ಹಾಲೇಶ ಅವರಿಗೆ 5 ವರ್ಷಗಳ ಕಠಿಣ ಸಜೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿದ್ದಾರೆ.
ದಂಡ ತೆರಲು ತಪ್ಪಿದಲ್ಲಿ ಮತ್ತೆ ಆರು ತಿಂಗಳು ಸಾದಾ ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದ್ದಾರೆ. ಇನ್ನೋರ್ವ ಆರೋಪಿ ಪ್ರಸನ್ನ ಸಾವಿಗೀಡಾಗಿದ್ದಾನೆ.
