ಚಿಕ್ಕಮಗಳೂರು: ನಗರಸಭೆಯಿಂದ 15 ದಿನಗಳ ಮುನ್ನವೇ ಫುಟ್‌ಪಾತ್ ಮೇಲಿನ ವಸ್ತುಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದರೂ ಉಲ್ಲಂಘಿಸಿರುವ ವರ್ತಕರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಅವರು ಸೂಚನೆ ನೀಡಿದರು.
ಅವರು ಇಂದು ನಗರಸಭೆಯಿಂದ ಏರ್ಪಡಿಸಲಾಗಿದ್ದ ನಗರದ ಮಲ್ಲಂದೂರು ರಸ್ತೆಯಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ ನಗರಸಭೆಯಿಂದ ಪರವಾನಗಿ ಪಡೆಯದೆ ಅನಧಿಕೃತವಾಗಿ ತರಕಾರಿ ಸೇರಿದಂತೆ ಹೂವು, ಹಣ್ಣು ಇನ್ನಿತರೆ ಅಂಗಡಿಗಳನ್ನು ನಡೆಸುತ್ತಿರುವ ವರ್ತಕರು ಫುಟ್‌ಪಾತ್ ಮೇಲೆ ವಸ್ತುಗಳನ್ನು ಇಡಬಾರದು ಎಂದು ಹೇಳಿದರು.
ಪರವಾನಗಿ ಪಡೆಯದೆ ಎಷ್ಟು ವರ್ಷಗಳಾಗಿವೆ ಅಲ್ಲಿಂದ ಇಲ್ಲಿಯವರೆಗೆ ವರ್ತಕರಿಗೆ ದಂಡ ಸಹಿತ ಶುಲ್ಕ ವಿಧಿಸಿ ಪರವಾನಗಿ ನೀಡಬೇಕು ಹಾಗೂ ಖಾಲಿ ನಿವೇಶನಗಳಲ್ಲಿ ಗಿಡಘಂಟಿಗಳು ಬೆಳೆದಿದ್ದರೆ ಸಂಬಂಧಪಟ್ಟ ಮಾಲಿಕರಿಗೆ ಸೂಚನೆ ನೀಡಿ ಸ್ವಚ್ಚತೆ ಮಾಡಿಕೊಳ್ಳಬೇಕೆಂದು ತಾಕೀತು ಮಾಡಿ ಎಂದು ಸಲಹೆ ನೀಡಿದರು.
ಕಸವನ್ನು ನಿಗದಿತ ಸ್ಥಳದಲ್ಲಿ ಹಾಕದೆ ಎಲ್ಲೆಂದರಲ್ಲಿ ಹಾಕಿ ನಗರದ ಸೌಂದಂiiಕ್ಕೆ ಧಕ್ಕೆ ತರಲಾಗುತ್ತಿದೆ. ಈ ಬಗ್ಗೆ ಪೊಲೀಸರು ಮತ್ತು ನಗರಸಭೆ ಸಿಬ್ಬಂದಿ, ಅಧಿಕಾರಿಗಳು ಕ್ರಮವಹಿಸಬೇಕೆಂದು ಸೂಚಿಸಿದರು.ಲಾಡ್ಜ್‌ಗಳ ನಿರ್ಮಾಣಕ್ಕೆ ನಗರಸಭೆಯಿಂದ ಪರವಾನಗಿ ನೀಡುವಾಗ ನಿಬಂಧನೆಗಳನ್ನು ವಿಧಿಸಿದ್ದು, ಕಟ್ಟಡ ಪೂರ್ಣಗೊಂಡ ಬಳಿಕ ಪಾರ್ಕಿಂಗ್‌ಗೆ ಮೀಸಲಿಟ್ಟಿದ್ದ ಜಾಗದಲ್ಲಿ ಪೆಟ್ಟಿಗೆ ಅಂಗಡಿಗೆ ಅನುಮತಿ ನೀಡಿ ವ್ಯಾಪಾರ ಮಾಡುತ್ತಿದ್ದಾರೆಂದು ದೂರಿದರು.
ಸಧ್ಯದಲ್ಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆರ್‌ಟಿಓ ಪೊಲೀಸರು ಮತ್ತು ಪರಿಸರ ಇಲಾಖೆಯ ಮುಖ್ಯಸ್ಥರನ್ನೊಳಗೊಂಡ ಸಭೆ ನಡೆಸಿ ಸೂಕ್ತ ಕ್ರಮ ವಹಿಸುತ್ತೇವೆ ಎಂದ ಅವರು, ಹಾಲಿ ಇರುವ ರಸ್ತೆಯನ್ನು ಸ್ವಚ್ಚವಾಗಿಡುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಗೋಪಿ, ಲಕ್ಷ್ಮಣ್, ಪೌರಾಯುಕ್ತ ಬಿ.ಸಿ ಬಸವರಾಜು, ಆರೋಗ್ಯ ನಿರೀಕ್ಷಕರಾದ ನಾಗಪ್ಪ, ಅಣ್ನಯ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.