ಚಿಕ್ಕಮಗಳೂರು: ದಟ್ಟ ಮಂಜು, ಕೊರೆಯುವ ಚಳಿ, ಥಂಡಿ ಗಾಳಿಯ ಪ್ರತೀಕೂಲ ವಾತಾರಣದ ನಡುವೆಯೂ ಸಹಸ್ರಾರು ಮಾಲಾಧಾರಿಗಳು, ಭಕ್ತರು ಪಾದುಕೆಗಳ ದರ್ಶನ ಪಡೆದು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರೊಂದಿಗೆ ಈ ಬಾರಿಯ ದತ್ತ ಜಯಂತಿ ಉತ್ಸವ ಗುರುವಾರ ಶಾಂತಿಯುತವಾಗಿ ಸಂಪನ್ನಗೊಂಡಿತು.
ವಿಶ್ವಹಿಂದೂ ಪರಿಷತ್-ಬಜರಂಗದಳ ವತಿಯಿಂದ ಆಯೋಜಿಸಲಾಗಿದ್ದ ವಿಜೃಂಭಣೆಯ ದತ್ತ ಜಯಂತಿ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ದತ್ತಾತ್ರೇಯನ ಭಜನೆ ಮಾಡುತ್ತ ದತ್ತಪೀಠಕ್ಕೆ ಆಗಮಿಸಿದ ಮಾಲಾಧಾರಿಗಳು, ಹೋಮ, ಹವನ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇರುಮುಡಿ ಅರ್ಪಿಸಿ, ತೀರ್ಥ, ಪ್ರಸಾದ ಸ್ವೀಕರಿಸಿ ಹಿಂತಿರುಗಿದರು.
ಇಡೀ ದತ್ತಪೀಠದ ಪರಿಸರವನ್ನು ಆವರಿಸಿಕೊಂಡಿದ್ದ ಮಂಜು, ತುಂತುರು ಮಳೆ, ಮೈ ಕೊರೆಯುವ ಚಳಿಯಲ್ಲೂ ದತ್ತ ಭಕ್ತರ ಉತ್ಸಾಹ ಮಾತ್ರ ಕುಂದಲಿಲ್ಲ. ಕೇಸರಿ ಕಲರವ, ಮಂತ್ರ ಘೋಷಗಳ ನಡುವೆ ಗುಹೆಯ ಆವರಣದಲ್ಲಿ ನಡೆದ ಉತ್ಸವದಲ್ಲಿ ಸಹಸ್ರಾರು ಮಾಲಾಧಾರಿಗಳು ಪಾಲ್ಗೊಂಡರು. ದತ್ತಪಾದುಕೆಗಳ ದರ್ಶನ ಪಡೆದು ಪುನೀತರಾದರು.
ವಾಹನಗಳಿಗೆ ಕೇಸರಿ ಹಾಗೂ ಭಗವಾಧ್ವಜಗಳನ್ನು ಕಟ್ಟಿ, ಧ್ವನಿವರ್ಧಕಗಳಲ್ಲಿ ಶ್ರೀರಾಮ, ಆಂಜನೇಯನ ಗೀತೆಗಳನ್ನು ಹಾಕಿಕೊಂಡು, ಘೋಷಣೆಗಳನ್ನು ಕೂಗುತ್ತಾ, ಪೀಠಕ್ಕೆ ಆಗಮಿಸಿದ ಭಕ್ತರು, ಬ್ಯಾರಿಕೇಡ್‌ನಲ್ಲಿ ಸರತಿಯಲ್ಲಿ ಸಾಗಿ ಪಾದುಕೆಗಳ ದರ್ಶನ ಪಡೆದರು. ಗುಹಾಂತರ ದೇವಾಲಯದ ಎದುರು ಭಾಗದ ಆವರಣದಲ್ಲೇ ನಡೆದ ಹೋಮ ಹವನಗಳನ್ನು ಕಣ್ತುಂಬಿಕೊಂಡು ಹೊರ ಆವರಣದ ಶೆಡ್‌ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅಲ್ಲಿಯೇ ಇರುಮುಡಿ ಸಮರ್ಪಿಸಿದರು.
ಸರ್ಕಾರದಿಂದ ನೇಮಿಸಲ್ಪಟ್ಟಿರುವ ಅರ್ಚಕರು ಗುಹೆಯಲ್ಲಿ ಪಾದುಕೆಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ, ಪುನಸ್ಕಾರಗಳನ್ನು ನೆರವೇರಿಸಿದರು. ಪೀಠದ ಆವರಣದಲ್ಲಿ ತಂತ್ರಿಗಳಿಂದ ಗಣಹೋಮ, ದತ್ತ ತಾರಕ ಹೋಮ, ದತ್ತಾತ್ರೇಯ ಮಹಾ ಮಂತ್ರ, ಮಹಾ ಯಾಗ, ಕಲಶಾಭಿಷೇಕ, ತಂತ್ರಿಗಳಿಂದ ಆಗಮೋಕ್ತವಾಗಿ ಪೂಜೆ, ಮಹಾ ರುದ್ರ ಹೋಮ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಇದೇ ವೇಳೆ ನಡೆದ ಧಾರ್ಮಿಕ ಸಭೆಯಲ್ಲಿ ಕಡೂರು ಎಳನಡು ಮಠದ ಶ್ರೀ ಜ್ಞಾನ ಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ, ಬೀರೂರಿನ ಬಾಳೆಹೊನ್ನೂರು ರಂಭಪುರಿ ಖಾಸಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರು ವಿಶ್ವಧರ್ಮ ಪೀಠದ ಶ್ರೀ ಜಯಬಸವಾನಂದ ಸ್ವಾಮೀಜಿಯವರು ಭಾಗವಹಿಸಿದ್ದರು.
ಈ ಹಿಂದೆ ಬಿಜೆಪಿ ಸರ್ಕಾರ ನೇಮಿಸಿದ್ದ ಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾದ ವ್ಯವಸ್ಥಾಪನಾ ಸಮಿತಿ ಅವಧಿ ಮುಗಿದಿರುವ ಕಾರಣ ಈ ಬಾರಿ ಜಿಲ್ಲಾಡಳಿತದ ಉಸ್ತುವಾರಿಯಲ್ಲೇ ಎಲ್ಲಾ ಕಾರ್ಯಕ್ರಮಗಳು ನಡೆದವು. ವ್ಯವಸ್ಥಾಪನಾ ಸಮಿತಿ ಆಡಳಿತಾಧಿಕಾರಿಗಳೂ ಆದ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕ ರೆಡ್ಡಿ ಅವರು ಸ್ಥಳದಲ್ಲೇ ಇದ್ದು ಎಲ್ಲಾ ಕಾರ್ಯಕ್ರಮಗಳ ಮೇಲುಸ್ತುವಾರಿ ನೋಡಿಕೊಂಡರು.
ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಜಿಲ್ಲಾ ಕಾರ್ಯದರ್ಶಿ ರಂಗನಾಥ್, ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ಬಜರಂಗದಳ ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ, ಜಿಲ್ಲಾ ಸಂಯೋಜಕ ಅಭಿಷೇಕ್ ಬಣಕಲ್, ವಿಹೆಚ್‌ಪಿ ಹಾಸನ ವಿಭಾಗ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಜಿಲ್ಲಾ ಮಠ, ಮಂದಿರ ಪ್ರಮುಖ್ ಆಟೋ ಶಿವಣ್ಣ, ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಇತರರು ಭಾಗವಹಿಸಿದ್ದರು.
ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಸೇರಿದಂತೆ ಬಿಜೆಪಿಯ ಹಲವು ಮುಖಂಡರು, ಚುನಾಯಿತ ಪ್ರತಿನಿಧಿಗಳು ಉತ್ಸವದಲ್ಲಿ ಪಾಲ್ಗೊಂಡರು. ಕಡೂರು ತಾಲ್ಲೂಕು ಹಾಗೂ ಹಾಸನ ಜಿಲ್ಲೆಗಳಿಂದ ನೂರಾರು ವಾಹನಗಳಲ್ಲಿ ಮಾಲಾಧಾರಿಗಳು ಏಕ ಕಾಲದಲ್ಲಿ ಪೀಠದತ್ತ ಆಗಮಿಸಿದ ಹಿನ್ನೆಲೆಯಲ್ಲಿ ಮಧ್ಯಾಹ್ನ ಗಿರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಕೆಲವು ಜಿಲ್ಲೆಗಳಿಂದ ಭಕ್ತರು ಬಸ್‌ಗಳಲ್ಲಿ ಆಗಮಿಸಿದ್ದ ಕಾರಣ ಸಂಚಾರಕ್ಕೆ ತೊಡಕಾಯಿತು.
ದತ್ತಪೀಠದ ಮಾರ್ಗದುದ್ದಕ್ಕೂ ಹಾಗೂ ಪೀಠದ ಪರಿಸರದಲ್ಲಿರುವ ಎಲ್ಲ ಗೋರಿಗಳ ಬಳಿಯೂ ಬಿಗಿ ಪೊಲೀಸ್ ಪಹರೆ ಏರ್ಪಡಿಸಲಾಗಿತ್ತು. ನಗರದ ಸೂಕ್ಷ್ಮ ಪ್ರದೇಶಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಸಿ.ಎಸ್.ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಆಮಟೆ ಪೀಠದಲ್ಲೇ ಇದ್ದು ಉಸ್ತುವಾರಿ ನೋಡಿಕೊಂಡರು.
