ಚಿಕ್ಕಮಗಳೂರು: ಇಲ್ಲಿನ ವೈದ್ಯಕೀಯ ಕಾಲೇಜು ಮತ್ತು ಹಾಸ್ಟೆಲ್‌ಗೆ ಮೂಲಭೂತ ಸೌಕರ್ಯಗಳನ್ನು ಶೀಘ್ರವೇ ಕಲ್ಪಿಸುವಂತೆ ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ರವರಿಗೆ ಮನವಿ ಸಲ್ಲಿಸಿದರು.

ಮೆಡಿಕಲ್ ಕಾಲೇಜಿನಲ್ಲಿ ಅವ್ಯವಸ್ಥೆಗಳು ಸರಿಪಡಿಸಲು ವೈದ್ಯಕೀಯ ಶಿಕ್ಷಣ ಸಚಿವರಿಗೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಗಿದೆ. ಚಿಕ್ಕಮಗಳೂರು ನಗರದ ಮೆಡಿಕಲ್ ಕಾಲೇಜಿನಲ್ಲಿ ತಾಂಡವಾಡುತ್ತಿರುವ ಅವ್ಯವಸ್ಥೆಗೆ ಸ್ಥಳೀಯ ಶಾಸಕರ ನೇರ ಹೊಣೆ ಎಂದು ಬಿಜೆಪಿ ಮುಖಂಡೆ ಅಂಕಿತ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮೆಡಿಕಲ್ ಕಾಲೇಜಿನ ವಸತಿ ನಿಲಯಗಳಲ್ಲಿ, ಕಾಲೇಜು ಕ್ಯಾಂಪಸ್ ಹೊರಭಾಗದಲ್ಲಿ ಬೀದಿದೀಪದ ವ್ಯವಸ್ಥೆ ಇರುವುದಿಲ್ಲ. ಕ್ಯಾಂಪಸ್‌ನ ಸುತ್ತಮುತ್ತ ಸ್ಟೇಷನರಿ ಹಾಗೂ ಕ್ಯಾಂಟಿನ್ ವ್ಯವಸ್ಥೆ ಇರುವುದಿಲ್ಲ. ವಿದ್ಯಾರ್ಥಿಗಳ ಕೊಠಡಿಗೆ ಪೀಠೋಪಕರಣಗಳ ವ್ಯವಸ್ಥೆ ಇಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಅಡುಗೆ ಕೋಣೆಯಲ್ಲಿಯೇ ಪಾತ್ರೆಗಳನ್ನು ತೊಳೆಯುತ್ತಿದ್ದು, ಅಡುಗೆ ಕೊಠಡಿ ಸ್ವಚ್ಚವಾಗಿಲ್ಲ, ಹಣ್ಣು-ತರಕಾರಿಗಳ ಗುಣಮಟ್ಟ ಹಾಗೂ ಶೌಚಾಲಯಗಳ ಸ್ವಚ್ಚತೆ ಕೊರತೆ, ಪೋಷಕರಿಗೆ ವೇಟಿಂಗ್ ರೂಂ ಕೊರತೆ ಇದೆ ಎಂದು ತಿಳಿಸಿದ್ದಾರೆ.
ಈ ವೇಳೆ ಮಹಿಳಾ ಮೋರ್ಚಾ ಮುಖಂಡರಾದ ವೀಣಾಶೆಟ್ಟಿ, ಕವಿತಾ ಶೇಖರ್, ಬಿಜೆಪಿ ಮುಖಂಡೆ ಅಂಕಿತ, ಲಲಿತಾರವಿನಾಯ್ಕ್, ಇಂದಿರಾ ಮತ್ತಿತರರು ಹಾಜರಿದ್ದರು.
