ಚಿಕ್ಕಮಗಳೂರು: ನಗರಸಭೆ ನಿಗದಿಪಡಿಸಿದ ಗಾಡಿಗೆ ಕಸ ನೀಡದೆ ಚರಂಡಿಗೆ ಹಾಕುತ್ತಿದ್ದ ನಗರದ ಬೆನಕ ಬಾರ್ ಆಂಡ್ ರೆಸ್ಟೋರೆಂಟ್ ಮಳಿಗೆ ಬಾಗಿಲಿಗೆ ನಗರಸಭೆ ಅಧಿಕಾರಿ, ಸಿಬ್ಬಂದಿ ಕಸ ತಂದು ಸುರಿದು ದಂಡ ಹಾಕಿದ್ದಾರೆ.
ಅಲ್ಲದೆ, ವ್ಯಾಪಾರ ಪರವಾನಗಿ ಪಡೆಯದ ಇಂಡಿಯನ್ ಪೆಟ್ರೋಲ್ ಬಂಕ್ ಗೆ ಒಂದು ದಿನದೊಳಗೆ ಬಂಕ್ ಲೈಸನ್ಸ್ ನವೀಕರಣ ಮಾಡಿಕೊಳ್ಳುವಂತೆ ಗಡುವುನೀಡಿದ್ದಾರೆ.

ಬಾರ್ ಆಂಡ್ ರೆಸ್ಟೋರೆಂಟ್ನವರು ಖಾಲಿ ಬಾಟಲಿ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ನಿತ್ಯ ಚರಂಡಿಗೆ ತಂದು ಸುರಿಯುತ್ತಿದ್ದರು. ಇದರಿಂದ ಸುತ್ತಮುತ್ತಲಿನ ವಾತಾವರಣ ಅನೈರ್ಮಲ್ಯದಿಂದ ಕೂಡಿತ್ತು. ಈ ಬಗ್ಗೆ ನಗರಸಭೆಯಿಂದ ಅನೇಕ ಬಾರಿ ಎಚ್ಚರಿಕೆ ನೀಡಲಾಗಿತ್ತು.
ಆದರೂ, ಮತ್ತೆ ಕಸ ಹಾಕುತ್ತಿದ್ದರಿಂದ ನಗರಸಭೆ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸುತ್ತಮುತ್ತ ಇದ್ದ ಕಸವನ್ನು ಒಟ್ಟುಗೂಡಿಸಿ ತಂದು ಮಳಿಗೆ ಬಾಗಿಲಿಗೆ ಸುರಿದರು. ಜತೆಗೆ 10 ಸಾವಿರ ರೂ. ದಂಡವನ್ನೂ ವಿಧಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷರಾದ ಶೀಲಾ ದಿನೇಶ್ ತಿಳಿಸಿದ್ದಾರೆ.

ಬಾರ್ ಪಕ್ಕದಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್ ಕಳೆದ 6 ವರ್ಷದಿಂದ ಟ್ರೇಡ್ ಲೈಸನ್ಸ್ ರಿನಿವಲ್ ಮಾಡಿಕೊಂಡಿರಲಿಲ್ಲ.ಹೀಗಾಗಿ ಆ ಬಂಕ್ ಮುಚ್ಚಿಸಲಾಯಿತು. ನಂತರ ನಡೆದ ಮಾತುಕತೆಯಲ್ಲಿ ಒಂದು ದಿನಗೊಳಗೆ ಲೈಸೆನ್ಸ್ ರಿನಿವಲ್ ಮಾಡಿ ಕೊಳ್ಳುವುದಾಗಿ ತಿಳಿಸಿದ ನಂತರ ಬಾಗಿಲು ತೆರೆಯಲು ಅವಕಾಶ ನೀಡಿದ್ದೇವೆ.

ಶನಿವಾರ ಮಾಡಿಕೊಳ್ಳದಿದ್ದಲ್ಲಿ ಬಂಕ್ ಮುಂದೆ ಕಸದ ರಾಶಿ ಸುರಿದು ವಾಹನಗಳು ಬಾರದಂತೆ ತಡೆಯುತ್ತೇವೆ ಎಂದು ನಗರಸಭೆ ಸದಸ್ಯ ಕುಮಾರಗೌಡ, ಅಧಿಕಾರಿಗಳು ತಿಳಿಸಿದ್ದಾರೆ.
