ಚಿಕ್ಕಮಗಳೂರು: ತೇಜಸ್ವಿ ಅವರ ಪ್ರೇಮದ ಬದುಕನ್ನು, ಸಾಂಸಾರಿಕ ಬದುಕನ್ನು ತುಂಬಾ ಅಧ್ಬುತವಾಗಿ ರಂಗದ ಮೇಲೆ ತರುವ ಮೂಲಕ ನನ್ನ ತೇಜಸ್ವಿ ನಾಟಕ ತೇಜಸ್ವಿ ಅವರ ಖಾಸಗಿ ಬದುಕಿನ ವಿವರಗಳನ್ನು ತೆರೆದಿಡುತ್ತದೆ ಎಂದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಪ್ರದೀಪ್ ಕೆಂಜಿಗೆ ಹೇಳಿದರು.

ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆದ ನನ್ನ ತೇಜಸ್ವಿ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತೇಜಸ್ವಿ ಅವರ ಸ್ವಂತ ಬದುಕಿನ ವಿವರಗಳು ಗೊತ್ತಿಲ್ಲದೇ ಇರುವವರಿಗೆ ಈ ನಾಟಕ ಆ ವಿವರಗಳನ್ನು ನೋಡುಗರೆದೆಗೆ ದಾಟಿಸುತ್ತದೆ. ಗಣರಾಜ್ಯೋತ್ಸವ ಅಂಗವಾಗಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗುವ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ತೇಜಸ್ವಿ ಅವರ ಕುರಿತ ವಸ್ತು ವಿಷಯ ಆಧರಿಸಿ ಪ್ರದರ್ಶನ ನಡೆಯಲಿದೆ. ಜನವರಿ 15 ರಿಂದ 26 ರವರೆಗೆ ಈ ಪ್ರದರ್ಶನ ನಡೆಯಲಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್ ಮಾತನಾಡಿ, ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದಲ್ಲಿ ನೂತನವಾಗಿ ಚಿಟ್ಟೆ ಉದ್ಯಾನವನ, ಆರ್ಕಿಡ್ ಲೋಕ ಅನಾವರಣಗೊಂಡಿದ್ದು ಜೀವಲೋಕದ ಬೆರಗು, ಮಹತ್ವವನ್ನು ತಿಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ವಿಮರ್ಶಕ ಡಾ.ಎಚ್.ಎಸ್.ಸತ್ಯನಾರಾಯಣ ಮಾತನಾಡಿ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ 2026 ನೇ ಸಾಲಿನ ಕ್ಯಾಲೆಂಡರ್ ಹೊರ ತರಲಾಗಿದ್ದು ಈ ಬಾರಿ ತೇಜಸ್ವಿ ಲೋಕ ಎಂಬ ಶೀರ್ಷಿಕೆಯಡಿ ಕ್ಯಾಲೆಂಡರ್ ರೂಪಿಸಲಾಗಿದ್ದು ತೇಜಸ್ವಿ ಅವರ ಬದುಕಿನ ವಿವರಗಳು ಕ್ಯಾಲೆಂಡರ್‌ನ ಪುಟಗಳಲ್ಲಿ ಕಾಣ ಸಿಗಲಿದೆ. ಎಲ್ಲಾ ತಿಂಗಳುಗಳಲ್ಲಿನ ಪರಿಸರ ಸಂಬಂಧಿತ ದಿನಾಚರಣೆಗಳ ದಿನಗಳನ್ನು ಹಾಕಲಾಗಿದೆ ಎಂದರು.
ತೇಜಸ್ವಿ ಪ್ರತಿಷ್ಠಾನದ ಸದಸ್ಯರಾದ ರಾಘವೇಂದ್ರ, ರವೀಶ್ ಕ್ಯಾತನಬೀಡು, ರುದ್ರಸ್ವಾಮಿ, ದೀಪಾ ಹಿರೇಗುತ್ತಿ ಅವರು 2026 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ನನ್ನ ತೇಜಸ್ವಿ ನಾಟಕದ ನಿರ್ದೇಶಕ ಬಿ.ಎಂ.ಗಿರಿರಾಜ, ಕಲಾವಿದರಾದ ಪರಮ್ ಕಲಾಮಾಧ್ಯಮ, ಸವಿತಾ ಪರಮ್, ಕಾತ್ಯಾಯಿಣ , ರಾಧಾಮಣ , ರಂಗು ಸಮರ್ಪಣ್, ನವೀನ್ ಹರಿ ಸಮಷ್ಟಿ, ತೇಜಸ್, ರಾಘವೇಂದ್ರ ಪ್ರಸಾದ್, ಶೈಲೇಂದ್ರ ಸಿಂಗ್, ಭರತ್ ಬಿ.ಜೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀನಿವಾಸ್, ನವದೀಪ್, ಪೂರ್ಣೇಶ್, ಮಲ್ಲಿಕಾರ್ಜುನ್, ಕೀಟ ತಜ್ಞ ಅವಿನಾಶ್ ತೇಜಸ್ವಿ ಪ್ರತಿಷ್ಠಾನ ತಾಂತ್ರಿಕ ಸಂಯೋಜಕ ಪ್ರಜ್ವಲ್, ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ತರುವೆ ಮುಂತಾದವರು ಇದ್ದರು.
