ಚಿಕ್ಕಮಗಳೂರು: ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಎಂದಿನಂತೆ ಜೇಷ್ಠತೆ ಆಧಾರದ ಮೇಲೆ ಗ್ರಾಹಕರ ಮನೆಗಳಿಗೆ ಸಂಬಂಧಿಸಿದ ಗ್ಯಾಸ್ ಏಜೆನ್ಸಿಗಳ ಮೂಲಕ ತಲುಪಿಸಲಾಗುತ್ತಿದ್ದು, ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಹಕರು ಗ್ಯಾಸ್ ಏಜೆನ್ಸಿಯ ಕಚೇರಿ, ಗೋದಾಮುಗಳಿಗೆ ಸಿಲಿಂಡರ್ ಪಡೆಯಲು ಹೋಗಬಾರದೆಂದು ಕೋರಲಾಗಿದೆ.

ಗ್ರಾಹಕರ ಸುರಕ್ಷತೆ ಹಾಗೂ ಎಲ್.ಪಿ.ಜಿ. ಸಿಲಿಂಡರ್ ಸುಗಮ ವಿತರಣೆ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ಗ್ಯಾಸ್ ಏಜೆನ್ಸಿ ಗೋದಾಮುಗಳಲ್ಲಿ ಗ್ರಾಹಕರಿಗೆ ಸಿಲಿಂಡರ್ ವಿತರಿಸದಂತೆ ಜಿಲ್ಲೆಯ ಎಲ್ಲಾ ಗ್ಯಾಸ್ ಏಜೆನ್ಸಿ ಮಾಲೀಕರಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಗ್ರಾಹಕರು ಮನೆ ಬಳಿಯೇ ಸಿಲಿಂಡರ್ ಪಡೆದು ಎಲ್.ಪಿ.ಜಿ.ಯನ್ನು ಮಿತವಾಗಿ ಬಳಸುವ ಮೂಲಕ ಸಹಕರಿಸಬೇಕೆಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಕೋರಿದ್ದಾರೆ.
ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ ಸರಬರಾಜು ಮಾಡಲಾಗುತ್ತಿದೆ. ಅಲ್ಲದೇ ವಿಶೇಷವಾಗಿ ಆಟೋ ಎಲ್.ಪಿ.ಜಿ.ಗೆ ಯಾವುದೇ ರೀತಿಯ ಕೊರತೆ ಇಲ್ಲ ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.

ಕಳೆದ ವಾರದಲ್ಲಿ ದಿನಕ್ಕೆ ಸರಾಸರಿ 64.5 ಮೆಟ್ರಿಕ್ ಟನ್ ಆಟೋ ಎಲ್‌ಪಿಜಿಯನ್ನು ವಿತರಿಸಲಾಗಿದೆ. ಸಂಘರ್ಷದ ಮೊದಲು ಈ ಪ್ರಮಾಣವು ದಿನಕ್ಕೆ 57.6 ಮೆಟ್ರಿಕ್ ಟನ್ ಇತ್ತು. ಇದು ಪೂರೈಕೆಯಲ್ಲಿನ ಗಮನಾರ್ಹ ಹೆಚ್ಚಳವನ್ನು ತೋರಿಸುತ್ತದೆ.
