Saturday, March 28, 2026
Homeಕ್ರೈಮ್ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಬಲಿ: ಕುಟುಂಬಸ್ಥರ ಆಕ್ರೋಶ!

ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಬಲಿ: ಕುಟುಂಬಸ್ಥರ ಆಕ್ರೋಶ!

ಚಿಕ್ಕಮಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಯೊಬ್ಬರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯದ ಕಾರಣ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಕೇಳಿ ಬಂದಿದೆ.

ಆಲ್ದೂರು ಸಮೀಪದ ಗಾಳಿಗಂಡಿ ನಿವಾಸಿ 46 ವರ್ಷದ ಲಕ್ಷ್ಮಣ್ ಎಂಬುವವರು ಮೃತಪಟ್ಟ ದುರ್ದೈವಿ, ಗುರುವಾರ ಮಧ್ಯಾಹ್ನ ಅವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಆದರೆ ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿ ರೋಗಿಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಲಕ್ಷ್ಮಣ್ ಕುಟುಂಬಸ್ಥರು ದೂರಿದ್ದಾರೆ. ತುರ್ತು ಸಂದರ್ಭದಲ್ಲಿ ರೋಗಿಯನ್ನು ಕರೆದೊಯ್ಯಲು ಕನಿಷ್ಠ ವೀಲ್‌ಚೇರ್ ವ್ಯವಸ್ಥೆಯನ್ನು ಕೂಡ ಮಾಡದೆ ವಿಳಂಬ ಮಾಡಿದ್ದರಿಂದಲೇ ಲಕ್ಷ್ಮಣ್ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ವೈದ್ಯರು ಹಾಗೂ ಸಿಬ್ಬಂದಿಯನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಜಿಲ್ಲಾ ಸರ್ಜನ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್ ಮೃತ ಕುಟುಂಬಸ್ಥರ ದೂರಿನ ಅನ್ವಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಆಸ್ಪತ್ರೆಯಲ್ಲಿ ನಡೆದ ಘಟನೆಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಚಿಕಿತ್ಸೆಯಲ್ಲಿ ವಿಳಂಬವಾಗಿರುವುದು ಸಾಬೀತಾದರೆ ಅವರ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಜರುಗಿಸಲಾಗುವುದು ತಿಳಿಸಿದ್ದಾರೆ.

ಒಟ್ಟಾರೆ ಈ ಘಟನೆಯು ಬಡ ರೋಗಿಗಳ ಪಾಲಿಗೆ ಸರ್ಕಾರಿ ಆಸ್ಪತ್ರೆಗಳು ಎಷ್ಟರಮಟ್ಟಿಗೆ ಆಸರೆಯಾಗುತ್ತಿವೆ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದ್ದು ಜಿಲ್ಲಾ ಸರ್ಜನ್ ನೀಡಿರುವ ಭರವಸೆಯಂತೆ ತನಿಖೆಯು ಪಾರದರ್ಶಕವಾಗಿ ನಡೆದು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಿ ಇಂತಹ ಅವ್ಯವಸ್ಥೆಗಳು ಸುಧಾರಿಸುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!