ಚಿಕ್ಕಮಗಳೂರು: ಸರಿಯಾದ ಪಠ್ಯಕ್ರಮವನ್ನು ಅನುಸರಿಸುವುದೂ ಸೇರಿದಂತೆ ಮೂರು ಸೂತ್ರಗಳನ್ನು ಅವಲಂಬಿಸುವ ಮೂಲಕ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಶಸ್ಸು ಪಡೆಯಬಹುದು ಎಂದು ಹೊಸದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹೆಚ್.ಬಿ.ಸುನಿಲ್‌ಕುಮಾರ್ ಸಲಹೆ ನೀಡಿದರು.

ನಗರದ ಮೌಂಟೆನ್ ವ್ಯೂ ಪದವಿ ಪೂರ್ವ ಕಾಲೇಜಿನ ಸಿದ್ದಾರ್ಥ ಸಭಾಂಗಣದಲ್ಲಿ ಸೋಮವಾರ ನಡೆದ ಉಚಿತ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಉದ್ಯೋಗಾವಕಾಶಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡಿದ ಅವರು, ಅಧಿಸೂಚನೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದು ಹಾಗೂ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಅಧ್ಯಯನ ಮಾಡುವುದರ ಮೂಲಕ ಯೋಜಿತ ಯಶಸ್ಸಿಗೆ ಪ್ರಯತ್ನ ನಡೆಸಬೇಕೆಂದು ಕಿವಿಮಾತು ಹೇಳಿದರು.
ಎಸ್‌ಎಸ್‌ಎಲ್‌ಸಿಯಿಂದ ಕೇಂದ್ರ ಲೋಕಸೇವಾ ಆಯೋಗದವರೆಗೂ ಅಸಂಖ್ಯಾತ ಹುದ್ದೆಗಳವರೆಗೂ ಉದ್ಯೋಗಾವಕಾಶಗಳು ಲಭ್ಯವಿರುವುದನ್ನು ವಿವರಿಸಿದ ಅವರು, ಈ ಸಂಬಂಧ ವೃತ್ತಿ ಅವಕಾಶ ಪಡೆಯುವ ಬಗೆಗಿನ ಟಿಪ್ಸ್‌ಗಳನ್ನು ನೀಡಿದರಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಡೆಸುವ ತಯಾರಿ ಬಗ್ಗೆ ತಿಳಿ ಹೇಳಿದರು.
ಹತ್ತನೇ ತರಗತಿ ಉತ್ತೀರ್ಣರಾದ ನಂತರ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ (ಎಸ್‌ಎಸ್‌ಸಿ, ಎಂಟಿಎಸ್, ರೈಲ್ವೇಸ್) ಮತ್ತು ರಾಜ್ಯ ಸರ್ಕಾರಗಳಲ್ಲಿ (ಅಗ್ನಿಶಾಮಕ, ಪೊಲೀಸ್, ಕಂದಾಯ ಇಲಾಖೆಗಳು) ಉದ್ಯೋಗಾವಕಾಶಗಳು ಲಭ್ಯವಿವೆ. ಪಿಯುಸಿ ಹಾಗೂ ಪದವಿಯ ನಂತರವೂ ಉದ್ಯೋಗಾವಕಾಶಗಳು ವಿಪುಲ ಅವಕಾಶಗಳು ತೆರೆದುಕೊಳ್ಳುತ್ತವೆ ಎಂದು ಕೂಲಂಕಷವಾಗಿ ಹೇಳಿದರು.
ಸ್ಟಾಫ್ ಸೆಲೆಕ್ಷನ್ ಆಯೋಗದಲ್ಲಿ ವರ್ಷಕ್ಕೆ ೭೩ ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತವೆ. ಹಾಗೆಯೇ ರೈಲ್ವೆಯಲ್ಲಿ ಸುಮಾರು ೫೦ ಸಾವಿರಕ್ಕೂ ಹೆಚ್ಚು ಹುದ್ದೆಗಳು ಸೃಷ್ಟಿಯಾಗುತ್ತವೆ. ಈ ಹುದ್ದೆಗಳಲ್ಲಿ ಅವಕಾಶ ಪಡೆಯಲು ಗ್ರಾಮೀನ ಕನ್ನಡ ವಿಭಾಗದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಅವಕಾಶ ಪಡೆಯಲು ಅಗತ್ಯ ಸಿದ್ಧತೆ ನಡೆಸಬೇಕಿದ್ದು, ಅಲ್ಲಿ ಎದುರಾಗುವ ಸವಾಲುಗಳನ್ನು ನಿಭಾಯಿಸಬೇಕೆಂದು ಸಮಗ್ರವಾಗಿ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮೌಂಟೆನ್ ವ್ಯೂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಬೀಬಾ ಎನ್.ಪಾಷಾ ಅವರು ಮಾತನಾಡಿ, ಕಲಾ ವಿಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಾತ್ರವಲ್ಲದೆ, ಇತರ ಕ್ಷೇತ್ರಗಳಲ್ಲಿ ಇರುವ ಅವಕಾಶಗಳನ್ನು ಪಡೆಯಲು ಇಲ್ಲಿ ಪಡೆಯುವ ಮಾರ್ಗದರ್ಶನ ಅನುಸರಿಸಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ತಸ್ನಿಮ್ ಫಾತೀಮ ಮಾತನಾಡಿ, ಸಾಮಾಜಿಕ ಜಾಲತಾಣಗಳು ಹಾಗೂ ಮೊಬೈಲ್‌ಗಳಿಗೆ ದಾಸರಾಗದೆ ಕಲಿಕೆಯ ಕಡೆಗೆ ಹೆಚ್ಚಿನ ಆಸಕ್ತಿ ನೀಡುವುದು ಅಗತ್ಯ. ಇದರಿಂದ ವಿದ್ಯಾರ್ಥಿಗಳು ತಮ್ಮ ವ್ಯಾಸಂಗದಲ್ಲಿ ಹೆಚ್ಚು ಸಾಧನೆ ಮಾಡಬಹುದು. ವೃತ್ತಿ ಮಾರ್ಗದರ್ಶನ ಪಡೆಯುವುದರಿಂದ ಸರ್ಕಾರಿ ನೌಕರಿಯಲ್ಲದೆ, ಇತರ ಕ್ಷೇತ್ರಗಳಲ್ಲೂ ಯಶಸ್ವಿಯಾಗಬಹುದು ಎಂದು ಹೇಳಿದರು.
ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ವೀಣಾ, ಕಾಲೇಜಿನ ಉಪ ಪ್ರಾಂಶುಪಾಲರಾದ ಜೆಲ್ಲಿ ಕೆ.ಜಾರ್ಜ್, ಉಪನ್ಯಾಸಕರುಗಳಾದ ಎಚ್.ಪಿ.ರಘು, ಶಿವರಾಜ್, ದೈಹಿಕ ಶಿಕ್ಷಕರಾದ ಮುದಬೀರ್ ಶಹಬಾಜ್, ಉಪನ್ಯಾಸಕರಾದ ಪ್ರಕಾಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
