ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬೇಸಿಗೆಯ ಧಗೆ ಆರಂಭವಾಗಿದೆ, ಗಿರಿ ಶಿಖರಗಳಲ್ಲಿ ಬಿಸಲಿನ ತಾಪ ಹೆಚ್ಚುತ್ತಲೇ ಇದೆ. ಹೌದು ಬೇಸಿಗೆಯಿಂದ ಮೂಕಪ್ರಾಣಿ, ಪಕ್ಷಿಗಳು ನೀರಿನ ಹಾಹಾಕಾರ ಎದುರಿಸುತ್ತಿವೆ. ಈ ವೇಳೆ ನೀರಿನ ಸಮಸ್ಯೆ ನೀಗಿಸಲು ಪ್ರವಾಸಿ ಮಿತ್ರರು ಮರಗಳಿಗೆ ಮಡಿಕೆ ಕಟ್ಟಿ ಮಾನವೀಯತೆ ಮೆರೆಯುತ್ತಿದ್ದಾರೆ.
ಬಿಸಿಲ ಝಳ ದಿನ ದಿನಕ್ಕೆ ಏರುತ್ತಿದೆ. ಮೂಕ ಪ್ರಾಣಿ-ಪಕ್ಷಿಗಳೂ ನೀರಿನ ಹಾಹಾಕಾರ ಎದುರಿಸುತ್ತಿವೆ. ಬೇಸಿಗೆಯ ಮಧ್ಯದಲ್ಲಿ ಇಲ್ಲಿರುವ ಕೆಲ ಜಲಪಾತಗಳಲ್ಲಿ ಹನಿ ನೀರಿಗೂ ಪರದಾಟದ ಪರಿಸ್ಥಿತಿ ಉದ್ಭವಿಸುತ್ತದೆ. ಈ ಕಠಿಣ ಪರಿಸ್ಥಿತಿಯಲ್ಲಿ ಪ್ರವಾಸಿಗರ ನೆರವಿಗೆ ಇರುವ ಪ್ರವಾಸಿ ಮಿತ್ರರು ಈಗ ಪ್ರಾಣಿ-ಪಕ್ಷಿಗಳ ದಾಹ ತಣಿಸಲು ಮುಂದಾಗಿದ್ದಾರೆ.

ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ವಿವಿಧ ಭಾಗಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಗುತ್ತಿಗೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗಂಗಾಧರ್, ಹರೀಶ್, ರಾಜು, ರಮೇಶ್ ಹಾಗೂ ಯೋಗೇಶ್ ಈ ಕಾರ್ಯಾರಂಭಿಸಿದ್ದಾರೆ. ಇವರು ಸ್ವಂತ ಹಣದಿಂದ ಮಡಿಕೆಗಳನ್ನು ಖರೀದಿಸಿ ಗಿರಿ ಶ್ರೇಣಿಯ ಸುಮಾರು 70ಕ್ಕೂ ಹೆಚ್ಚು ಮರಗಳ ಕೊಂಬೆಗಳಿಗೆ ಮಡಿಕೆಗಳನ್ನು ಭದ್ರವಾಗಿ ಕಟ್ಟಿ, ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ.
